ADVERTISEMENT

ಹೊಸ ಹುಮ್ಮಸ್ಸು, ಹೊಸ ಭರವಸೆ

ಇಂದಿನಿಂದ ರಣಜಿ ಪಂದ್ಯ: ವಿಶ್ವಾಸದಲ್ಲಿ ಕರ್ನಾಟಕ, ಹರಿಯಾಣಕ್ಕೆ ಅಗ್ನಿಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಲಾಹ್ಲಿ, ರೋಹ್ಟಕ್‌: ಮೊದಲ ಗೆಲುವಿಗಾಗಿ ಚಡಪಡಿಸಿ ಕಾದು ಕಾದು ಸುಸ್ತಾಗಿದ್ದ ಕರ್ನಾಟಕ ತಂಡದ ಆಟಗಾರರು ಈಗ ನಿರಾಳರಾಗಿದ್ದಾರೆ. ಒಡಿಶಾ ಎದುರು ಲಭಿಸಿದ ಜಯದಿಂದ ವಿಶ್ವಾಸ ಹೆಚ್ಚಿಸಿಕೊಂಡಿದ್ದು, ಈ ಸಲದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ಭರವಸೆ ಹೊಂದಿದ್ದಾರೆ.

ರೋಹ್ಟಕ್‌ನಿಂದ 20 ಕಿ.ಮೀ. ದೂರ ದಲ್ಲಿರುವ ಲಾಹ್ಲಿ ಎಂಬ ಗ್ರಾಮದಲ್ಲಿ ಸುಂದರವಾಗಿ ಅರಳಿರುವ ಕ್ರೀಡಾಂಗ ಣದಲ್ಲಿ ಶುಕ್ರವಾರದಿಂದ ಕ್ರಿಕೆಟ್‌ ‘ಹಬ್ಬ’ ಆರಂಭವಾಗಲಿದೆ. ಅದು ಹರಿಯಾಣ ತಂಡದ ಎದುರು. ಇದಕ್ಕಾಗಿ ಬನ್ಸಿಲಾಲ್ ಅಂಗಳ ಸಜ್ಜಾಗಿದೆ. ಇಲ್ಲಿ ಕಳೆದ ವರ್ಷವೂ ರಣಜಿ ಪಂದ್ಯಗಳು ನಡೆದಿದ್ದವು. ಆದರೆ, ಈ ಸಲದ ಪ್ರತಿ ಪಂದ್ಯಗಳು ಕ್ರಿಕೆಟ್‌ ಪ್ರೇಮಿಗಳಿಗೆ ವಿಶೇಷ ಎನಿಸಿವೆ. ಇದಕ್ಕೆ ಕಾರಣ ಸಚಿನ್‌ ತೆಂಡೂಲ್ಕರ್‌. ಸಚಿನ್‌ ತಮ್ಮ ಕೊನೆಯ ರಣಜಿ ಪಂದ್ಯವನ್ನು ಇದೇ ಕ್ರೀಡಾಂಗಣದಲ್ಲಿ ಆಡಿದ್ದರು. ಮುಂಬೈಕರ್‌ ಅವರ ಆಟ ನೋಡುವ ಹುಮ್ಮಸ್ಸಿನಿಂದ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಆದ್ದರಿಂದ ರಣಜಿ ಪಂದ್ಯ ಎಂದಾಕ್ಷಣ ಪುಟ್ಟ ಗ್ರಾಮದಲ್ಲಿ ದೊಡ್ಡ ಸಂಭ್ರಮ.

ವಿಶ್ವಾಸದಲ್ಲಿ ಕರ್ನಾಟಕ: ಜಾರ್ಖಂಡ್‌, ಗುಜರಾತ್‌ ಮತ್ತು ವಿದರ್ಭ ತಂಡಗಳ ಎದುರು ಡ್ರಾ ಸಾಧಿಸಿದ್ದ ಕರ್ನಾಟಕ ತಂಡ ಕಟಕ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಗೆಲುವು ಪಡೆದಿತ್ತು. ಅನುಭವಿ ವೇಗಿ ಆರ್‌. ವಿನಯ್‌ ಕುಮಾರ್ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌ ಸಿ.ಎಂ. ಗೌತಮ್‌ ತಂಡವನ್ನು ಗೆಲುವಿನೆಡೆಗೆ ಮುನ್ನಡೆ ಸಿದ್ದರು. ಇದು ತಂಡದ ಹುಮ್ಮಸ್ಸು ಹೆಚ್ಚಿಸಿದೆಯಲ್ಲದೇ, ಇನ್ನೊಂದು ಜಯ ಸಾಧಿಸುವ ಭರವಸೆಯನ್ನೂ ಮೂಡಿಸಿದೆ.

ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ವಿನಯ್‌ ಈ ಪಂದ್ಯ ದಲ್ಲೂ ಆಡುತ್ತಿಲ್ಲ. ಜೊತೆಗೆ ಗಾಯಗೊಂಡಿರುವ ರಾಬಿನ್‌ ಉತ್ತಪ್ಪ ಕೂಡಾ ಅಲಭ್ಯ. ಇದು ಕರ್ನಾಟಕ ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಆದರೆ, ಮಂಡಿ ನೋವಿನಿಂದ ಚೇತರಿಸಿ ಕೊಂಡಿರುವ ಸ್ಟುವರ್ಟ್‌ ಬಿನ್ನಿ ಮರಳಿ ರುವುದಷ್ಟೇ ಸಮಾಧಾನದ ವಿಷಯ.

ಈ ಸಲದ ರಣಜಿ ಟೂರ್ನಿಯಲ್ಲಿ ಶತಕ ಗಳಿಸಿರುವ ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ ಮತ್ತು ಬಿನ್ನಿ ಅವರ ಮೇಲೆ ಹೆಚ್ಚು ಜವಾಬ್ದಾರಿಯಿದೆ. ನಾಯಕ ಗೌತಮ್‌, ಗಣೇಶ್‌ ಸತೀಶ್‌ ಮತ್ತು ಕುನಾಲ್‌ ಕಪೂರ್‌ ಮಧ್ಯಮ ಕ್ರಮಾಂಕದ ಹೊಣೆ ಹೊತ್ತು ಕೊಳ್ಳಬೇಕಿದೆ.
ಕಣ್ಣಾಮುಚ್ಚಾಲೆ ಆಡುವ ಪಿಚ್‌ನಲ್ಲಿ ಟಾಸ್‌ ಮಹತ್ವದ ಪಾತ್ರ ವಹಿಸಲಿದೆ. ಈ ಋತುವಿನಲ್ಲಿ ಇಲ್ಲಿ ನಡೆದ ಮೂರು ಪಂದ್ಯಗಳ ಅಂಕಿಅಂಶ ಗಳನ್ನು ಗಮನಿಸಿದಾಗ ಮೊದಲ ದಿನ ಬೌಲ್‌ ಮಾಡಿದವರು ಮೇಲುಗೈ ಸಾಧಿಸಿದ್ದಾರೆ. ಆದ್ದರಿಂದ ಕರ್ನಾಟಕ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲಿ ಸಾಮರ್ಥ್ಯ ಸಾಬೀತು ಮಾಡಬೇಕಿದೆ.

ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಅಭಿಮನ್ಯು ಮಿಥುನ್‌ ಮೇಲೆ ಬೌಲಿಂಗ್‌ ವಿಭಾಗದ ಹೊಣೆಯಿದೆ. ನಾಲ್ಕು ಪಂದ್ಯಗಳಿಂದ ಅವರು 19 ವಿಕೆಟ್‌ ಉರುಳಿಸಿದ್ದಾರೆ. ಇನ್ನೊಬ್ಬ ವೇಗಿ ಮಂಡ್ಯದ ಎಚ್‌.ಎಸ್‌. ಶರತ್‌, ಎಸ್‌. ಅರವಿಂದ್‌ ಮತ್ತು ಸ್ಪಿನ್ನರ್‌ ಕೆ.ಪಿ. ಅಪ್ಪಣ್ಣ ಆತಿಥೇಯ ಬ್ಯಾಟ ್ಸ್‌ಮನ್‌ಗಳಿಗೆ ಸವಾಲೊಡ್ಡಬೇಕಿದೆ. ಜೊತೆಗೆ ಹೋದ ವರ್ಷದ ಪಂದ್ಯದಲ್ಲಿ ಹರಿಯಾಣದ ‘ಬಾಲಂಗೋಚಿ’ ಬ್ಯಾಟ್ಸ್‌ಮನ್‌ಗಳು ತೋರಿದ ಚಮತ್ಕಾರವನ್ನೂ ಮರೆಯುವಂತಿಲ್ಲ.

ಹುಬ್ಬಳ್ಳಿಯಲ್ಲಿ ಹೋದ ವರ್ಷ ಉಭಯ ತಂಡಗಳು ಮುಖಾಮುಖಿ ಯಾಗಿದ್ದಾಗ ಅಮಿತ್‌ ಮಿಶ್ರಾ (ಔಟಾಗದೆ 202) ಮತ್ತು ಜಯಂತ್‌ ಯಾದವ್‌ ( 211) ದ್ವಿಶತಕ ಗಳಿ ಸಿದ್ದರು. ಆದ್ದರಿಂದ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.
ಗೌತಮ್‌ ಬಳಗ ನಾಲ್ಕು ಪಂದ್ಯಗಳಿಂದ 13 ಪಾಯಿಂಟ್‌ಗಳನ್ನು ಹೊಂದಿದೆ. ರಣಜಿ ಇತಿಹಾಸದಲ್ಲಿ ಹರಿಯಾಣದ ಎದುರು ಎಂಟು ಸಲ ಆಡಿರುವ ಕರ್ನಾಟಕ ನಾಲ್ಕು ಗೆಲುವು ಮತ್ತು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಆತಿಥೇಯರಿಗೆ ಅಗ್ನಿಪರೀಕ್ಷೆ: ಐದು ಪಂದ್ಯಗಳ ನ್ನಾಡಿ ನಾಲ್ಕರಲ್ಲಿ ಸೋಲು ಕಂಡಿರುವ ಹರಿಯಾಣ ತಂಡಕ್ಕೆ ಇದು ಅಗ್ನಿಪರೀಕ್ಷೆಯ ಪಂದ್ಯ. ಮುಂದೆ ನಡೆ ಯಲಿರುವ ಗುಜರಾತ್‌ ಮತ್ತು ಒಡಿಶಾ ತಂಡಗಳ ಎದುರಿನ ಪಂದ್ಯ ದಲ್ಲಿ ಗೆಲುವು ಸಾಧಿಸಿದರೆ ಮಾತ್ರ ಮುಂದಿನ ಹಾದಿ. ಇಲ್ಲವಾದರೆ, ಲೀಗ್‌ ಹಂತದ ಲ್ಲಿಯೇ ತವರಿನ ಹಾದಿ ಅನಿವಾರ್ಯ. ಏಕೆಂದರೆ, ಹರಿಯಾಣ ಆರು ಪಾಯಿಂಟ್‌ಗಳನ್ನಷ್ಟೇ ಹೊಂದಿದೆ.
ಹಾಲಿ ಚಾಂಪಿಯನ್‌ ಮುಂಬೈ, ವಿದರ್ಭ, ದೆಹಲಿ ಮತ್ತು ಪಂಜಾಬ್‌ ಎದುರು ಸೋಲು ಕಂಡಿರುವ ಆತಿಥೇಯರು ಜಾರ್ಖಂಡ್ ಎದುರು ಮಾತ್ರ ಜಯ ಸಾಧಿಸಿದ್ದಾರೆ. ಬನ್ಸಿಲಾಲ್‌ ಅಂಗಳದಲ್ಲಿ ಹೋದ ವಾರ ಆಡಿರುವ ಕೊನೆಯ ಪಂದ್ಯದಲ್ಲೂ ಸೋಲು ಕಂಡಿದ್ದರು.

ಕೆ. ಅಭಿಮನ್ಯು, ಅವಿ ಬರೋಟ್‌, ಉತ್ತಮ ಫಾರ್ಮ್‌ನಲ್ಲಿರುವ ಸಚಿನ್‌ ರಾಣಾ, ಸನ್ನಿ ಸಿಂಗ್‌ ಅವರ ಮೇಲೆ ಬ್ಯಾಟಿಂಗ್‌ ವಿಭಾಗ ಅವಲಂಬಿತ ವಾಗಿದೆ. ಕರ್ನಾಟಕದ ಎದುರು ಸದಾ ಉತ್ತಮ ಪ್ರದರ್ಶನ ತೋರುವ ಹರ್ಷಲ್‌ ಪಟೇಲ್‌ ಅಪಾಯಕಾರಿ ಎನಿಸಬಲ್ಲರು.
ಜೊತೆಗೆ  ಜೋಗಿಂದರ್‌ ಶರ್ಮ, ಸ್ಪಿನ್ನರ್‌ ಜಯಂತ್‌ ಯಾದವ್‌ ಹರಿಯಾಣ ತಂಡದ ಬಲ ಎನಿಸಿದ್ದಾರೆ.

ಆದರೆ, ಮೋಹಿತ್‌ ಶರ್ಮ ದಕ್ಷಿಣ ಆಫ್ರಿಕಾ ಎದುರು ಸರಣಿ ಆಡಲು ಹೋಗಿದ್ದು ಈ ತಂಡಕ್ಕೆ ಹಿನ್ನಡೆ ಉಂಟುಮಾಡಿದೆ. ಬೌಲರ್‌ಗಳನ್ನು ಎದುರಿಸುವ ಜೊತೆಗೆ ಮೈ ಕೊರೆಯುವ ಚಳಿಯನ್ನು ಎದುರಿಸು ವುದೂ ಸವಾಲು ಎನಿಸಿದೆ. ಆದ್ದರಿಂದ, ಚಳಿಯ ಆಟ, ಗುಟ್ಟು ಬಿಟ್ಟುಕೊಡದ ಪಿಚ್‌ ಮರ್ಮದ ನಡುವೆ ಗೆಲುವಿನ ರಸದೂಟ ಸವಿಯುವ ಅವಕಾಶ ಯಾರಿಗೆ ಲಭಿಸಲಿದೆ ಎನ್ನುವ ಕುತೂಹಲ ಗರಿಗೆದರಿದೆ.

ತಂಡಗಳು ಇಂತಿವೆ
ಕರ್ನಾಟಕ: ಸಿ.ಎಂ. ಗೌತಮ್‌ (ವಿಕೆಟ್‌ ಕೀಪರ್‌/ನಾಯಕ), ಕೆ.ಎಲ್. ರಾಹುಲ್‌, ಮಯಂಕ್‌ ಅಗರವಾಲ್‌, ಕುನಾಲ್‌ ಕಪೂರ್‌, ಮನೀಷ್‌ ಪಾಂಡೆ, ಸ್ಟುವರ್ಟ್‌್ ಬಿನ್ನಿ, ಗಣೇಶ್‌ ಸತೀಶ್‌, ಅಬ್ರಾರ್‌ ಖಾಜಿ, ಅಭಿಮನ್ಯು ಮಿಥುನ್‌, ಎಚ್‌.ಎಸ್‌. ಶರತ್‌, ಶ್ರೀಶಾಂತ್‌ ಅರವಿಂದ್‌, ರೋನಿತ್‌ ಮೋರೆ, ಕೆ.ಪಿ. ಅಪ್ಪಣ್ಣ, ಕರುಣ್‌ ನಾಯರ್‌ ಮತ್ತು ಆರ್‌. ಸಮರ್ಥ್‌.
ಹರಿಯಾಣ: ರಾಹುಲ್‌ ದೇವನ್‌ (ನಾಯಕ), ನಿತಿನ್‌ ಸೈನಿ, ಕೆ. ಅಭಿಮನ್ಯು, ಸನ್ನಿ ಸಿಂಗ್‌, ಅವಿ ಬರೋಟ್‌, ರಾಹುಲ್‌ ದಲಾಲ್‌, ಸಚಿನ್‌ ರಾಣಾ, ಜಯಂತ್‌ ಯಾದವ್‌, ಹರ್ಷಲ್‌ ಪಟೇಲ್‌, ಬಿ. ಸಂಜಯ್‌, ಸಂದೀಪ್ ಸಿಂಗ್‌, ಜೋಗಿಂದರ್‌ ಶರ್ಮ, ಯಜುವೇಂದ್ರ ಚಹಾಲ್‌, ಆಶಿಶ್‌ ಹೂಡಾ ಮತ್ತು ರಾಹುಲ್‌ ತಿವಾತಿಯಾ.
ಪಂದ್ಯ ಆರಂಭ:  ಬೆಳಿಗ್ಗೆ 9.30ಕ್ಕೆ

ADVERTISEMENT

ಹರಿಯಾಣ ಎದುರು ಕರ್ನಾಟಕದ ಆಟಗಾರರ ಸಾಧನೆ
* ಪಂದ್ಯದಲ್ಲಿ 10ಕ್ಕಿಂತ ಹೆಚ್ಚು ವಿಕೆಟ್‌ ಪಡೆದಿದ್ದು ದೊಡ್ಡ ಗಣೇಶ್‌: 29ಕ್ಕೆ12 (2002/03 ಫರೀದಾಬಾದ್‌ನಲ್ಲಿ ನಡೆದ ಪಂದ್ಯ)* ಶತಕ ಗಳಿಸಿದವರು: ಬ್ರಿಜೇಶ್‌ ಪಟೇಲ್‌, ವಿಜಯ್‌ ಭಾರದ್ವಾಜ್‌, ರಾಬಿನ್‌ ಉತ್ತಪ್ಪ, ಅಮಿತ್‌ ವರ್ಮ ಮತ್ತು ಕುನಾಲ್‌ ಕಪೂರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.