ADVERTISEMENT

14 ಕ್ಲಬ್‌ಗಳು ಫೇಲ್

ಎಐಎಫ್‌ಎಫ್ ಪರವಾನಗಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಐ-ಲೀಗ್‌ನ ಎಲ್ಲಾ 14 ಕ್ಲಬ್‌ಗಳು ಏಷ್ಯಾ ಫುಟ್‌ಬಾಲ್ ಕಾನ್‌ಫೆಡರೇಷನ್‌ನ (ಎಎಫ್‌ಸಿ) `ಕ್ಲಬ್ ಲೈಸನ್ಸ್ ಅರ್ಹತೆ' ಪಡೆಯುವಲ್ಲಿ ವಿಫಲವಾಗಿವೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಶುಕ್ರವಾರ ತಿಳಿಸಿದೆ.

ಗಿರಿಜಾ ಶಂಕರ್ ಮುಂಗಳಿ ನೇತೃತ್ವದ ಎಐಎಫ್‌ಎಫ್‌ನ ಕ್ಲಬ್ ಪರವಾನಗಿ ಸಮಿತಿ, ಕ್ಲಬ್‌ಗಳಿಗೆ ಪರವಾನಗಿ ನೀಡಲು ನಿರಾಕರಿಸಿದೆ. ಎಲ್ಲಾ ಕ್ಲಬ್‌ಗಳನ್ನು ಪರಿಶೀಲಿಸಲು ಮೇ-ಜೂನ್ ತಿಂಗಳಲ್ಲಿ ಎಐಎಫ್‌ಎಫ್ ಐದು ಮಂದಿ ಸದಸ್ಯರ ತಂಡವನ್ನು ರಚಿಸಿತ್ತು. ಈ ತಂಡ ನೀಡಿದ್ದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಗಿರಿಜಾ ಶಂಕರ್ ಮಾತ್ರವಲ್ಲದೇ ಫಿಫಾ ಪ್ರಾಂತೀಯ ಅಭಿವೃದ್ಧಿ (ದಕ್ಷಿಣ ಹಾಗೂ ಮಧ್ಯ ಏಷ್ಯಾ) ಅಧಿಕಾರಿ ಶಾಜಿ ಪ್ರಭಾಕರನ್, ಉಷಾನಾಥ್ ಬ್ಯಾನರ್ಜಿ, ಪಂಕಜ್ ಜೈನ್, ಐ-ಲೀಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಾಂದೊ ಧರ್ ಸಮಿತಿಯ ಇತರ ಸದಸ್ಯರು.

ಆದರೆ ಎಲ್ಲಾ ಕ್ಲಬ್‌ಗಳಿಗೆ ಎಐಎಫ್‌ಎಫ್ ಜೀವದಾನ ನೀಡಿದೆ. ಐ-ಲೀಗ್ ಹಾಗೂ ಫೆಡರೇಷನ್ ಕಪ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಪರವಾನಗಿಯಿಂದ ವಿನಾಯತಿ  ಪಡೆಯಲು ಇಲ್ಲವೇ ಮೇಲ್ಮನವಿ ಸಲ್ಲಿಸಲು ಕ್ಲಬ್‌ಗಳಿಗೆ ಅವಕಾಶ ನೀಡಿದೆ.

ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆಗಸ್ಟ್ 14ರ ವೇಳೆಗೆ ಕ್ಲಬ್‌ಗಳು, ಎಐಎಫ್‌ಎಫ್‌ನ ಕ್ಲಬ್ ಪರವಾನಗಿ ಮ್ಯಾನೇಜರ್ ರೊಮಾ ಖನ್ನಾ ಅವರಿಗೆ ವಿನಾಯತಿ ಮನವಿ ಸಲ್ಲಿಸಬೇಕಿದೆ. ಕ್ಲಬ್‌ಗಳು ವಿನಾಯತಿ ಪಡೆಯುವುದನ್ನು   ಕಡ್ಡಾಯಗೊಳಿಸಲಾಗಿದೆ.

`ಇದು ಎಎಫ್‌ಸಿ ವಿಧಿಸಿದ ಕಡ್ಡಾಯ ನಿಯಮವಾಗಿದೆ. ಅದನ್ನು ಎಐಎಫ್‌ಎಫ್ ಅಂಗೀಕರಿಸಿದೆ. ಆದ್ದರಿಂದ ಪರವಾನಗಿ ಹೊಂದುವುದು ಕಡ್ಡಾಯವಾಗಿದ್ದು, ಎಲ್ಲಾ ಕ್ಲಬ್‌ಗಳು ಇದನ್ನು ಪಾಲಿಸಬೇಕಿದೆ' ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.