ADVERTISEMENT

14 ವರ್ಷಗಳ ಬಳಿಕ ಹರ್ಡಲ್ಸ್‌ನಲ್ಲಿ ಅಮೆರಿಕಕ್ಕೆ ಚಿನ್ನ: ಸಂಭ್ರಮದ ತುತ್ತತುದಿಯಲ್ಲಿ ಏರಿಸ್

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ಲಂಡನ್: 2000ರಲ್ಲಿ ಆಘಾತ, 2004ರಲ್ಲಿಯೂ ನಿರಾಸೆ, 2008ರಲ್ಲಿ ಮತ್ತೆ ಆಘಾತ... ಆದರೆ ಈ ಬಾರಿ ಅಮೆರಿಕಕ್ಕೆ ಅದೃಷ್ಟ ಒಲಿದೇ ಬಿಟ್ಟಿತು. ಕಾರಣ ಈ ದೇಶದ ಓಟಗಾರ ಏರಿಸ್ ಮೆರಿಟ್ ಲಂಡನ್ ಒಲಿಂಪಿಕ್ಸ್ ಪುರುಷರ ವಿಭಾಗದ 110 ಮೀಟರ್ಸ್‌ ಹರ್ಡಲ್ಸ್ ಓಟದ ಚಾಂಪಿಯನ್.

ವಿಶ್ವ ದಾಖಲೆ ಹೊಂದಿರುವ ಕ್ಯೂಬಾದ ಡೇರಾನ್ ರಾಬ್ಲೆಸ್ ಹಾಗೂ ಒಲಿಂಪಿಕ್ಸ್ ದಾಖಲೆ ಹೊಂದಿರುವ ಚೀನಾದ ಲಿಯು ಕ್ಸಿಯಾನ್ ಗಾಯಗೊಂಡು ಹಿಂದೆ ಸರಿದ ಕಾರಣ ಏರಿಸ್ ಮೆರಿಟ್ ಚಿನ್ನದ ಪದಕಕ್ಕೆ ಒಡೆಯ ಎನಿಸಿದರು. ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.

ಬುಧವಾರ ರಾತ್ರಿ ನಡೆದ 110 ಮೀಟರ್ ಹರ್ಡಲ್ಸ್ ಫೈನಲ್ ಸ್ಪರ್ಧೆಯಲ್ಲಿ ಏರಿಸ್ 12.92 ಸೆಕೆಂಡ್‌ಗಳಲ್ಲಿ ಓಡಿ ಮೊದಲ ಸ್ಥಾನ ಪಡೆದರು. ಆದರೆ ಕೂದಲೆಳೆ ಅಂತರದಲ್ಲಿ ಅವರು ಒಲಿಂಪಿಕ್ಸ್ ದಾಖಲೆ  ನಿರ್ಮಿಸುವ ಅವಕಾಶ ಕಳೆದುಕೊಂಡರು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಚೀನಾದ ಲಿಯು 12.91 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು.

ADVERTISEMENT

ಆದರೆ ಏರಿಸ್ ತಮ್ಮ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಂಡರು. `ಈ ಸಾಧನೆ ಬಗ್ಗೆ ಯಾವ ರೀತಿ ಮಾತನಾಡಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ. ಅಷ್ಟೊಂದು ಖುಷಿಯಾಗಿದ್ದೇನೆ~ ಎಂದು ಅವರು ಪ್ರತಿಕ್ರಿಯಿಸಿದರು.

1996ರ ಅಟ್ಲಾಂಟದಲ್ಲಿ ಅಲೆನ್ ಜಾನ್ಸನ್ ಚಿನ್ನ ಗೆದ್ದ ಮೇಲೆ ಅಮೆರಿಕದ ಯಾವ ಓಟಗಾರನಿಗೆ ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನ (110 ಮೀ.ಹರ್ಡಲ್ಸ್) ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಏರಿಸ್ ಆ ನಿರಾಶೆಯನ್ನು ಹೋಗಲಾಡಿಸಿದರು.

`ಹರ್ಡಲ್ಸ್‌ನಲ್ಲಿ ಈ ಹಿಂದೆ ಅಮೆರಿಕದ್ದೇ ಪ್ರಾಬಲ್ಯವಿತ್ತು. ಆದರೆ ಹಿಂದಿನ ಮೂರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಜಾನ್ಸನ್ ಗೆದ್ದಿದ್ದೇ ಕೊನೆ. ಹಾಗಾಗಿ ಈ ಬಾರಿ ನಾನು ಗೆದ್ದ ಚಿನ್ನಕ್ಕೆ ವಿಶೇಷ ಅರ್ಥವಿದೆ. ಇಡೀ ಅಮೆರಿಕ ಖುಷಿಯಾಗಿದೆ~ ಎಂದು ಅಮೆರಿಕಾದವರೇ ಆದ ಜೆಸಾನ್ ರಿಚರ್ಡ್ಸನ್ (13.04 ಸೆ.) ಬೆಳ್ಳಿ ಗೆದ್ದರು. ಆದರೆ ಅಚ್ಚರಿ ಪ್ರದರ್ಶನ ತೋರಿದ್ದು ಜಮೈಕಾದ ಹ್ಯಾನ್ಸೆ ಪಾರ್ಚ್‌ಮೆಂಟ್. ಕಂಚಿನ ಪದಕ ಗೆದ್ದ ಅವರು 13.12 ಸೆಕೆಂಡ್‌ಗಳಲ್ಲಿ ಓಡಿದರು. ಅವರ ಮೇಲೆ ಯಾರೂ ನಿರೀಕ್ಷೆ ಇಟ್ಟಿರಲಿಲ್ಲ. ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಈ ಸಾಧನೆ ಮಾಡಿದರು. 

ಫಲಿತಾಂಶ: ಪುರುಷರ ವಿಭಾಗದ 110 ಮೀ.ಹರ್ಡಲ್ಸ್: ಏರಿಸ್ ಮೆರಿಟ್ (ಅಮೆರಿಕ; 12.92 ಸೆಕೆಂಡ್ಸ್)-1, ಜೆಸಾನ್ ರಿಚರ್ಡ್ಸನ್ (ಅಮೆರಿಕ; 13.04 ಸೆ.)-2, ಹ್ಯಾನ್ಸೆ ಪಾರ್ಚ್‌ಮೆಂಟ್ (ಜಮೈಕಾ; 13.12)-3.

ಫೆಲಿಕ್ಸ್ ಕನಸು ನನಸು

ಲಂಡನ್ (ಐಎಎನ್‌ಎಸ್):  ಈ ಬಾರಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ಅಮೆರಿಕದ ಅಲಿಸಾನ್ ಫೆಲಿಕ್ಸ್ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಏಕೆಂದರೆ ಅವರೀಗ ಮಹಿಳೆಯರ ವಿಭಾಗದ 200 ಮೀಟರ್ಸ್‌ ಸ್ಪರ್ಧೆಯಲ್ಲಿ `ಚಿನ್ನದ ಓಟಗಾರ್ತಿ~.

ಒಲಿಂಪಿಕ್ ಕ್ರೀಡಾಕೂಟದ ಈ ವಿಭಾಗದ ಓಟದಲ್ಲಿ ಫೆಲಿಕ್ಸ್ ಮೊದಲ ಸ್ಥಾನದೊಂದಿಗೆ ಚಿನ್ನ ಗೆದ್ದರು. ಈ ಸಾಧನೆಯ ಹಾದಿಯಲ್ಲಿ ಅವರು ಹಿಂದಿಕ್ಕಿದ್ದು 100 ಮೀಟರ್ ಓಟದ ಚಾಂಪಿಯನ್ ಜಮೈಕಾದ ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್ ಅವರನ್ನು.

ಬುಧವಾರ ರಾತ್ರಿ ನಡೆದ ಈ ಓಟದಲ್ಲಿ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದ ಫೆಲಿಕ್ಸ್ 21.88 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು ಮೂರು ಬಾರಿಯ ವಿಶ್ವ ಚಾಂಪಿಯನ್ ಕೂಡ.  ಅವರೇನು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ `ಫಿನಿಷಿಂಗ್~ ಅದ್ಭುತವಾಗಿತ್ತು.
`ಈ ಸಾಧನೆ ಮಾಡಲು ನನಗೆ ಸಾಧ್ಯವಾಗಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು~ ಎಂದು ಫೆಲಿಕ್ಸ್ ಪ್ರತಿಕ್ರಿಯಿಸಿದರು. ಜಮೈಕಾದ ಫ್ರೇಸರ್ ಪ್ರೈಸ್ ಎರಡನೇ ಸ್ಥಾನ ಗಳಿಸಿದರು. ಅಚ್ಚರಿ ಪ್ರದರ್ಶನ ತೋರಿದ ಅಮೆರಿಕದ ಕಾರ್ವೆುಲಿಟಾ ಜೆಟರ್‌ಗೆ ಕಂಚು ಒಲಿಯಿತು.

ಆದರೆ ದೊಡ್ಡ ಆಘಾತ ಅನುಭವಿಸಿದ್ದು ಜಮೈಕಾದ ವೆರೊನಿಕಾ ಕ್ಯಾಂಬೆಲ್-ಬ್ರೌನ್. ಸತತ ಮೂರನೇ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಅವರ ಕನಸು ನುಚ್ಚುನೂರಾಯಿತು. ಫಲಿತಾಂಶ: ಅಲಿಸಾನ್ ಫೆಲಿಕ್ (ಅಮೆರಿಕ; 21.88 ಸೆಕೆಂಡ್)-1, ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್ (ಜಮೈಕಾ; 22.09 ಸೆ.)-2, ಕಾರ್ಮೆಲಿಟಾ ಜೆಟರ್ (ಅವೆುರಿಕ; 22.14 ಸೆ.)-3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.