ADVERTISEMENT

15ನೇ ಸ್ಥಾನಕ್ಕೆ ತೃಪ್ತಿಪಟ್ಟ ದತ್ತು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 19:30 IST
Last Updated 13 ಆಗಸ್ಟ್ 2016, 19:30 IST
15ನೇ ಸ್ಥಾನಕ್ಕೆ ತೃಪ್ತಿಪಟ್ಟ ದತ್ತು
15ನೇ ಸ್ಥಾನಕ್ಕೆ ತೃಪ್ತಿಪಟ್ಟ ದತ್ತು   

ರಿಯೊ ಡಿ ಜನೈರೊ (ಪಿಟಿಐ):   ಪದಕದ ಸ್ಪರ್ಧೆಯಿಂದ ಹೊರಬಿದ್ದಿರುವ ಭಾರತದ ದತ್ತು ಬಾಬನ್‌ ಬೋಕನಾಳ್‌ ಅವರು ಒಲಿಂಪಿಕ್ಸ್‌ನ ರೋವಿಂಗ್ ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ 15ನೇ ಸ್ಥಾನ ಪಡೆದು ತಮ್ಮ ಹೋರಾಟವನ್ನು ಮುಗಿಸಿದರು.

ಪುರುಷರ ಸಿಂಗಲ್ಸ್‌ನ ಸ್ಕಲ್ಸ್‌ ವಿಭಾಗದಲ್ಲಿ ಮಹಾರಾಷ್ಟ್ರದ ದತ್ತು ಆರು ನಿಮಿಷ 54.96 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ವಿಭಾಗದ ಸ್ಪರ್ಧಿಗಳು 2000 ಮೀಟರ್ಸ್ ಗುರಿ ಮುಟ್ಟಬೇಕಿತ್ತು.

‘ಸಿ’ ಗುಂಪಿನಲ್ಲಿ ಅವರು ಅಗ್ರಸ್ಥಾನ ಪಡೆದರು. ಚುರುಕಿನ ಕೌಶಲದ ಮೂಲಕ ಗಮನ ಸೆಳೆದು ಮೊದಲ 500 ಮೀಟರ್ಸ್ ಹಾದಿ ಕ್ರಮಿಸಲು ಒಂದು ನಿಮಿಷ 38.38 ಸೆಕೆಂಡುಗಳನ್ನು ತೆಗೆದುಕೊಂಡರು. ಆದರೆ 500ರಿಂದ 1000 ಮೀ. ಮುಟ್ಟುವ ಹಾದಿಯಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಿದರು. ಅರ್ಧ ಹಾದಿ ಕ್ರಮಿಸಲು ಮೂರು ನಿಮಿಷ 23.80 ಸೆಕೆಂಡುಗಳು ಬೇಕಾಯಿತು.

ಕೊನೆಯ 500 ಮೀ. ಗುರಿ ಬಾಕಿ ಇದ್ದಾಗ ದತ್ತು ಐದು ನಿಮಿಷ 11. 98 ಸೆಕೆಂಡುಗಳನ್ನು ತೆಗೆದು ಕೊಂಡಿದ್ದರು. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಒಂಬತ್ತನೇ ರೋವಿಂಗ್ ಸ್ಪರ್ಧಿ ಎನ್ನುವ ಕೀರ್ತಿ ಹೊಂದಿರುವ ದತ್ತು ಎಫ್‌ಐಎಸ್‌ಎ ಏಷ್ಯನ್‌ ಮತ್ತು ಒಸಿನೀಯಾ ಚಾಂಪಿಯನ್‌ಷಿಪ್‌ನಲ್ಲಿ ಏಳು ನಿಮಿಷ 07.63 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂ ಡಿದ್ದರು. 2014ರ ರಾಷ್ಟ್ರೀಯ ರೋವಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಜಯಿಸಿದ್ದರು.

ಡ್ರೈಸ್ದಾಲ್‌ಗೆ ಚಿನ್ನ: 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಆಸ್ಟ್ರೇಲಿಯಾದ ಮಾಹೆ ಡ್ರೈಸ್ದಾಲ್‌ ಈ ಬಾರಿಯೂ ಚಿನ್ನದ ಪದಕ ಪಡೆದರು. ನಿಗದಿತ ಗುರಿಯನ್ನು ಅವರು ಆರು ನಿಮಿಷ 41.34 ಸೆಕೆಂಡುಗಳಲ್ಲಿ ಮುಟ್ಟಿದರು. ಡ್ರೈಸ್ದಾಲ್‌ ಅವರು 2008ರ ಬೀಜಿಂಗ್ ಕೂಟದಲ್ಲಿ ಕಂಚು ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.