ADVERTISEMENT

2015ರ ಸ್ಯಾಫ್‌ ಕಪ್‌ ಫುಟ್‌ಬಾಲ್‌ಗೆ ಭಾರತ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 17:48 IST
Last Updated 10 ಸೆಪ್ಟೆಂಬರ್ 2013, 17:48 IST

ಕಠ್ಮಂಡು (ಪಿಟಿಐ): ಸ್ಯಾಫ್‌ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡ ಟ್ರೋಫಿ ಗೆಲ್ಲುವ ಮುನ್ನವೇ ಖುಷಿಯ ಅಲೆಯಲ್ಲಿದೆ. 2015ರ ಸ್ಯಾಫ್ ಕಪ್‌ಗೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಲಭಿಸಿದ್ದು ಇದಕ್ಕೆ ಕಾರಣ.

ಸ್ಯಾಫ್‌ ಕಾರ್ಯಕಾರಿ ಸಮಿತಿ ಮಂಗಳವಾರ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿತು. ಈ ಟೂರ್ನಿ ಕೇರಳ ಇಲ್ಲವೇ ನವದೆಹಲಿಯಲ್ಲಿ ನಡೆಯಲಿದೆ. ಭಾರತದಲ್ಲಿ 1999 ಮತ್ತು 2011ರಲ್ಲಿ ಸ್ಯಾಫ್‌ ನಡೆದಿತ್ತು. ಈಗ ಮೂರನೇ ಬಾರಿ ಅವಕಾಶ ಲಭಿಸಿದೆ.

‘2015ರ ಸ್ಯಾಫ್‌ ಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ. ಆದರೆ, ಯಾವ ನಗರದಲ್ಲಿ ಟೂರ್ನಿ ನಡೆಯಲಿದೆ ಎಂಬುದು ಅಂತಿಮವಾಗಿಲ್ಲ. ಕೇರಳ ಮತ್ತು ದೆಹಲಿ ನಡುವೆ ಇದಕ್ಕಾಗಿ ಪೈಪೋಟಿ ನಡೆಯುತ್ತಿದೆ’ ಎಂದು ಸ್ಯಾಫ್‌ನ ಪ್ರಧಾನ ನಿರ್ದೇಶಕ ಅಲ್ಬೆರ್ಟೊ ಕೊಲಾಸೊ ತಿಳಿಸಿದರು. ಇದರ ಜೊತೆಗೆ ಸ್ಯಾಫ್‌ ಕ್ಲಬ್‌ ಕಪ್‌ ಚಾಂಪಿಯನ್‌ಷಿಪ್ ಆಯೋಜಿಸಲು ಸಭೆ ತೀರ್ಮಾನಿಸಿದೆ. ಹೊಸ ಟೂರ್ನಿ ಮುಂದಿನ ವರ್ಷದಿಂದ ಆರಂಭವಾಗುವ ಸಾಧ್ಯತೆಯಿದೆ. ಆದರೆ, ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಪಾಕಿಸ್ತಾನದಲ್ಲಿ ಮಹಿಳಾ ಸ್ಯಾಫ್‌ ಕಪ್‌ ಮತ್ತು 19 ವರ್ಷದೊಳಗಿನವರ ಬಾಲಕರ ಟೂರ್ನಿ ಆಯೋಜಿಸಲು ಸಭೆ  ನಿರ್ಧರಿಸಿತು. ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಕಾರ್ಯದರ್ಶಿ ಕುಶಾಲ್ ದಾಸ್‌ ಭಾರತವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.