ADVERTISEMENT

250 ತಂಡಗಳಿಂದ ಪೈಪೋಟಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೆಂಗಳೂರು: ಕೊಡವ ಕುಟುಂಬಗಳ ಹಾಕಿ ಉತ್ಸವದ 16ನೇ ಆವೃತ್ತಿಯ ಆತಿಥ್ಯವನ್ನು ಐಚೆಟ್ಟಿರ ಕುಟುಂಬ ವಹಿಸಿಕೊಂಡಿದ್ದು, `ಐಚೆಟ್ಟಿರ ಹಾಕಿ ಕಪ್~ ಟೂರ್ನಿ ಏಪ್ರಿಲ್ 21ರಿಂದ ಮೇ 13ರ ವರೆಗೆ ಕೊಡಗಿನ ಅಮ್ಮತ್ತಿಯಲ್ಲಿ ನಡೆಯಲಿದೆ. ಇದಕ್ಕಾಗಿ ಪೂರ್ವಭಾವಿ ಸಿದ್ದತೆಗಳು ಆರಂಭವಾಗಿವೆ.

ರಾಷ್ಟ್ರಮಟ್ಟದ ದರ್ಜೆಯ ಎರಡು ಮೈದಾನಗಳನ್ನು ಸಿದ್ಧಪಡಿಸಲಾಗುವುದು. ನಾಕ್‌ಔಟ್ ಮಾದರಿಯಲ್ಲಿ ನಡೆಯುವ ಪಂದ್ಯಗಳಲ್ಲಿ ಒಟ್ಟು 250ಕ್ಕೂ ಹೆಚ್ಚು ಕೊಡವ ಕುಟುಂಬ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ವರೆಗೆ ಪಂದ್ಯಗಳು ಜರುಗಲಿವೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಚೆಟ್ಟಿರ ಹಾಕಿ ಕಪ್ ಟೂರ್ನಿ ಸಮಿತಿಯ ಮುಖ್ಯಸ್ಥ ಐ.ಕೆ. ಅನಿಲ್ ತಿಳಿಸಿದರು.

`ಐಚೆಟ್ಟಿರ ಕುಟುಂಬವು ಮೊದಲ ಬಾರಿ ಹಾಕಿ ಉತ್ಸವದ ಆತಿಥ್ಯ ವಹಿಸಿದೆ. ಆತಿಥ್ಯ ವಹಿಸುವ ಕುಟುಂಬದವರ ಹೆಸರನ್ನು ಟೂರ್ನಿಗೆ ಇಡುವುದು ಸಂಪ್ರದಾಯ. ಯುವ ಆಟಗಾರರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಜ್ಜುಗೊಳಿಸಬೇಕು ಎನ್ನುವುದು ಈ ಉತ್ಸವದ ಉದ್ದೇಶ~ ಎಂದು ಅವರು ವಿವರಿಸಿದರು.

`ಈ ಟೂರ್ನಿಯನ್ನು ಸಂಘಟಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು 30 ಲಕ್ಷ ರೂಪಾಯಿ ನೀಡಿದ್ದಾರೆ. ಮೂಲ ಸೌರ್ಕಯ ಕಲ್ಪಿಸಲು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಧನ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಪೊನ್ನಂಪೇಟೆಯ ಜೂನಿಯರ್ ಕಾಲೇಜಿನ ಹಾಕಿ ಅಂಗಳವನ್ನು ಅಸ್ಟ್ರೋ ಟರ್ಫ್ ಆಗಿ ಪರಿವರ್ತಿಸಲು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸಹ ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ~ ಎಂದೂ ನುಡಿದರು.

ಈ ಟೂರ್ನಿಯಲ್ಲಿ ಒಟ್ಟು ಐದು ಲಕ್ಷ ರೂಪಾಯಿ ಬಹುಮಾನವಿರುತ್ತದೆ. ಮೇ 13ರಂದು ಫೈನಲ್ ಪಂದ್ಯ ಜರುಗಲಿದೆ. ಎರಡು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಸುಮಾರು 40 ಸಹಸ್ರ ಪ್ರೇಕ್ಷಕರಿಗೆ ಪಂದ್ಯಗಳನ್ನು ವೀಕ್ಷಿಸಲು ತಾತ್ಕಾಲಿಕ ಗ್ಯಾಲರಿಗಳನ್ನು ನಿರ್ಮಿಸುವ ಕಾರ್ಯ ಈಗ ಆರಂಭವಾಗಿದೆ.

ಪ್ರದರ್ಶನ ಪಂದ್ಯ: ಟೂರ್ನಿಯ ಉದ್ಘಾಟನಾ ದಿನ (ಏಪ್ರಿಲ್ 21ರಂದು) ಭಾರತ ರಾಷ್ಟ್ರೀಯ ಹಾಕಿ ತಂಡ ಹಾಗೂ ಕೊಡಗು ಇಲೆವೆನ್ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.

ಈ ಪಂದ್ಯ ತಲಾ 20 ನಿಮಿಷಗಳ ಅವಧಿಯದ್ದಾಗಿರುತ್ತದೆ. ಈ ಸಂದರ್ಭದಲ್ಲಿ ಭಾರತ ಹಾಕಿ ತಂಡದ ಮುಖ್ಯ ಕೋಚ್ ಮೈಕೆಲ್ ನಾಬ್ಸ್, ಹಾಕಿ  ಇಂಡಿಯಾ ಕಾರ್ಯದರ್ಶಿ ನರೀಂದರ್ ಬಾತ್ರಾ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಸಂದರ್ಭದಲ್ಲಿ ಮಾತನಾಡಿದ ನಾಬ್ಸ್, `ಜನರ ಬಳಿಯಿಂದ ಕೊಡವ ಹಾಕಿ ಉತ್ಸವದ ಬಗ್ಗೆ ಕೇಳಿದಾಗ ಅಚ್ಚರಿ ಪಟ್ಟಿದ್ದೆ. ಈ ತರಹದ ಟೂರ್ನಿಗಳು ಆಸ್ಟ್ರೇಲಿಯಾದಲ್ಲಿ ನಡೆಯುವುದಿಲ್ಲ. ಭಾರತ ತಂಡದಲ್ಲಿರುವ ಕೊಡಗಿನ ಆಟಗಾರರು ಅಲ್ಲಿನ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ~ ಎಂದು ಸಂತಸ ವ್ಯಕ್ತಪಡಿಸಿದರು.
ಹಾಕಿ ಫೌಂಡೇಶನ್: ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು `ಕೊಡಗು ಹಾಕಿ ಫೌಂಡೇಶನ್~ ಸ್ಥಾಪಿಸಲು ಐಚೆಟ್ಟಿರ ಕುಟುಂಬ ನಿರ್ಧರಿಸಿದೆ.

`ಕೊಡಗು ಹಾಕಿ ಫೌಂಡೇಶನ್ ಸ್ಥಾಪಿಸುವ ಮೂಲಕ ಆಟಗಾರರಿಗೆ ಶಿಷ್ಯ ವೇತನ, ಶೈಕ್ಷಣಿಕ ವೆಚ್ಚ, ವಿವಿಧ ಹಾಕಿ ತಜ್ಞರಿಂದ ತರಬೇತಿ, ದೇಶದ ವಿವಿಧ ವೃತ್ತಿಪರ ತಂಡಗಳೊಂದಿಗೆ ಆಡುವ ಅವಕಾಶ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಲಾಗುವುದು~ ಎಂದು ಅನಿಲ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಟೂರ್ನಿಯ ಪ್ರಧಾನ ಪೋಷಕ ಟಿಟ್ಟು ಬಿದ್ದಪ್ಪ, ಕಾರ್ಯದರ್ಶಿ ಐ.ಸಿ. ಸುಬ್ರಮಣಿ, ಸಂಚಾಲಕ ರಾಣಾ ಐಚೆಟ್ಟಿರ, ಭಾರತ ಪುರುಷರ ತಂಡದ ಮುಖ್ಯ ತರಬೇತಿದಾರ ಮೈಕೆಲ್ ನಾಬ್ಸ್, ಸಹಾಯಕ ಕೋಚ್ ಕಾರಿಯಪ್ಪ ಹಾಗೂ `ಟಿ.ಐ. ಸೈಕಲ್ ಆಫ್ ಇಂಡಿಯಾ~ದ ಡಿಜಿಎಂ ಎಂ. ನಾಡಕರ್ಣಿ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.