ADVERTISEMENT

ಸ್ವಿಟೋಲಿನಾಗೆ ಗೆಲುವು

ಏಜೆನ್ಸೀಸ್
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಸ್ಪೇನ್‌ನ ಕಾರ್ಲಾ ಸೊರೆಜ್‌ ನವರೊ ಬಾರಿಸಿದ ಚೆಂಡನ್ನು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಹಿಂತಿರುಗಿಸಿದ ರೀತಿ. –ಎಎಫ್‌ಪಿ ಚಿತ್ರ
ಸ್ಪೇನ್‌ನ ಕಾರ್ಲಾ ಸೊರೆಜ್‌ ನವರೊ ಬಾರಿಸಿದ ಚೆಂಡನ್ನು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಹಿಂತಿರುಗಿಸಿದ ರೀತಿ. –ಎಎಫ್‌ಪಿ ಚಿತ್ರ   

ಬ್ರಿಸ್ಬೇನ್‌, ಆಸ್ಟ್ರೇಲಿಯಾ: ಉಕ್ರೇನ್‌ನ ಎಲಿನಾ ಸ್ವಿಟೋಲಿನಾ, ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಜಯಿಸಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಸ್ವಿಟೋಲಿನಾ 6–2, 6–4ರ ನೇರ ಸೆಟ್‌ಗಳಿಂದ ಸ್ಪೇನ್‌ನ ಕಾರ್ಲಾ ಸೊರೆಜ್‌ ನವರೊ ಅವರನ್ನು ಸೋಲಿಸಿದರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಆರನೇ ಸ್ಥಾನ ಹೊಂದಿರುವ ಸ್ವಿಟೋಲಿನಾ ಮೊದಲ ಸೆಟ್‌ನಲ್ಲಿ ಮಿಂಚು ಹರಿಸಿ ದರು. ಶರವೇಗದ ಸರ್ವ್‌ಗಳನ್ನು ಸಿಡಿಸಿದ ಅವರು ಆಕರ್ಷಕ ಬ್ಯಾಕ್‌ ಹ್ಯಾಂಡ್‌ ಹೊಡೆತಗಳ ಮೂಲಕ ಗೇಮ್‌ ಗೆದ್ದುಕೊಂಡರು.

ADVERTISEMENT

ಮೊದಲ ಸೆಟ್‌ ಗೆದ್ದು ವಿಶ್ವಾಸದಿಂದ ಪುಟಿಯುತ್ತಿದ್ದ ಸ್ವಿಟೋಲಿನಾಗೆ ಎರ ಡನೇ ಸೆಟ್‌ನಲ್ಲಿ ಕಾರ್ಲಾ ಪ್ರಬಲ ಪೈಪೋಟಿ ಒಡ್ಡಿದರು. ಬಲಿಷ್ಠ ಗ್ರ್ಯೌಂಡ್‌ ಸ್ಟ್ರೋಕ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಹೀಗಾಗಿ ಸೆಟ್‌ 4–4ರಲ್ಲಿ ಸಮಬಲವಾಯಿತು. ಆ ಬಳಿಕ ಸ್ವಿಟೋಲಿನಾ ಪಾರಮ್ಯ ಮೆರೆದರು.

ಚುರುಕಿನ ಡ್ರಾಪ್‌ ಮತ್ತು ಬೇಸ್‌ ಲೈನ್‌ ಹೊಡೆತಗಳ ಮೂಲಕ ಒಂಬತ್ತನೇ ಗೇಮ್‌ ಜಯಿಸಿದ ಅವರು ಮರು ಗೇಮ್‌ನಲ್ಲೂ ಗುಣಮಟ್ಟದ ಆಟ ಆಡಿ ಎದುರಾಳಿಯ ಸವಾಲು ಮೀರಿದರು.

ಮೊದಲ ಸುತ್ತಿನ ಇನ್ನೊಂದು ಹೋರಾಟದಲ್ಲಿ ಅನಾ 6–1, 6–2ರ ನೇರ ಸೆಟ್‌ಗಳಿಂದ ನೆದರ್ಲೆಂಡ್ಸ್‌ನ ಕಿಕಿ ಬರ್ಟೆನ್ಸ್‌ ವಿರುದ್ಧ ಗೆದ್ದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಕೈಯಾ ಕನೆಪಿ 6–2, 6–2ರಲ್ಲಿ ಡೇರಿಯಾ ಕಸಾತ್ಕಿನಾ ಎದುರೂ, ಸೊರಾನ ಕಿರ್ಸ್ಟಿ 7–6, 6–1ರಲ್ಲಿ ಜೆನಿಫರ್‌ ಬ್ರಾಡಿ ಮೇಲೂ, ಅಲಿಯಾಕ್ಸಾಂಡ್ರ ಸಸನೊವಿಚ್‌ 1–6, 6–3, 7–5ರಲ್ಲಿ ಕ್ರಿಸ್ಟಿನಾ ಮ್ಲಾಡೆನೊವಿಚ್‌ ವಿರುದ್ಧವೂ, ಅನೆಟ್‌ ಕೊಂಟಾವೀಟ್‌ 6–0, 6–3ರಲ್ಲಿ ಹೀಥರ್‌ ವಾಟ್ಸನ್‌ ಮೇಲೂ ಗೆದ್ದರು.

ಹ್ಯಾರಿಸನ್‌ ಎರಡನೇ ಸುತ್ತಿಗೆ
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಅಮೆರಿಕದ ರ‍್ಯಾನ್‌ ಹ್ಯಾರಿಸನ್‌ ಎರಡನೇ ಸುತ್ತು ಪ್ರವೇಶಿಸಿದರು. ಮೊದಲ ಸುತ್ತಿನ ಹೋರಾಟದಲ್ಲಿ ರ‍್ಯಾನ್‌ 6–4, 3–6, 6–2ರಲ್ಲಿ ಲಿಯೊನಾರ್ಡ್‌ ಮೇಯರ್‌ ಅವರನ್ನು ಮಣಿಸಿದರು. ಇತರ ಪಂದ್ಯಗಳಲ್ಲಿ ಮ್ಯಾಥ್ಯೂ ಎಬ್ಡೆನ್‌ 6–3, 6–2ರಲ್ಲಿ ಫ್ರಾನ್ಸಸ್‌ ಟಿಯಾಫೊ ಎದುರೂ, ಹೊರಾಸಿಯೊ ಜೆಬಲ್ಲೊಸ್‌ 6–3, 6–4ರಲ್ಲಿ ಅರ್ನೆಸ್ಟೊ ಎಸ್ಕೊಬೆಡೊ ವಿರುದ್ಧವೂ ಗೆದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.