ADVERTISEMENT

ಇಂಗ್ಲೆಂಡ್‌ಗೆ ರೂಟ್ ಆಸರೆ

ಏಜೆನ್ಸೀಸ್
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ಜೋ ರೂಟ್
ಜೋ ರೂಟ್   

ಸಿಡ್ನಿ: ನಿರಂತರ ವಿಕೆಟ್‌ಗಳನ್ನು ಕಳೆದುಕೊಂಡು ಪರದಾಡುತ್ತಿದ್ದ ಇಂಗ್ಲೆಂಡ್‌ ತಂಡಕ್ಕೆ ನಾಯಕ ಜೋ ರೂಟ್ ಮತ್ತು ಐದನೇ ಕ್ರಮಾಂಕದ ಡೇವಿಡ್ ಮೆಲಾನ್‌ ಬಲ ತುಂಬಿದರು. ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದ ಇವರಿಬ್ಬರು ಆ್ಯಷಸ್ ಸರಣಿಯ ಕೊನೆಯ ಟೆಸ್ಟ್‌ನ ಮೊದಲ ದಿನ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾಯಿತು.

ಮೊದಲ ಮೂರು ಪಂದ್ಯಗಳಲ್ಲಿ ಸೋತು ನಾಲ್ಕನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಇಂಗ್ಲೆಂಡ್‌ ಗುರುವಾರ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಕಳೆದ ಪಂದ್ಯದಲ್ಲಿ ದಾಖಲೆಯ ಶತಕ ಗಳಿಸಿದ್ದ ಅಲೆಸ್ಟರ್ ಕುಕ್‌ ಜೊತೆ ಮಾರ್ಕ್‌ ಸ್ಟೋನ್‌ಮ್ಯಾನ್ ಮೊದಲ ವಿಕೆಟ್‌ಗೆ ಸೇರಿಸಿದ್ದು 28 ರನ್‌ ಮಾತ್ರ. ನಂತರ ಕುಕ್‌ ಜೊತೆಗೂಡಿದ ಜೇಮ್ಸ್ ವಿನ್ಸ್ 60 ರನ್‌ ಸೇರಿಸಿ ಔಟಾದರು. ಈ ಎರಡೂ ವಿಕೆಟ್‌ ಪ್ಯಾಟ್ ಕಮಿನ್ಸ್ ಅವರ ಪಾಲಾದವು.

ನಾಯಕನ ಜೊತೆಗೂಡಿ ಇನಿಂಗ್ಸ್ ಕಟ್ಟಲು ಶ್ರಮಿಸಿದ ಕುಕ್ 39 ರನ್ ಗಳಿಸಿ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. 95 ರನ್‌ ಗಳಿಸುವಷ್ಟರಲ್ಲಿ ಪ್ರವಾಸಿ ತಂಡದ ಮೂರು ವಿಕೆಟ್ ಕಬಳಿಸಿದ ಆಸ್ಟ್ರೇಲಿಯಾ ಖುಷಿಪಟ್ಟಿತು. ಆದರೆ ಈ ಸಂಭ್ರಮಕ್ಕೆ ರೂಟ್ ಮತ್ತು ಮೆಲಾನ್‌ ತಣ್ಣೀರು ಹಾಕಿದರು. ತಾಳ್ಮೆಯಿಂದ ರನ್ ಕಲೆ ಹಾಕಿದ ಇವರಿಬ್ಬರು ಸಂದರ್ಭ ಸಿಕ್ಕಾಗಲೆಲ್ಲ ಬೌಂಡರಿ ಗಳಿಸಿ 133 ರನ್‌ ಸೇರಿಸಿದರು.

ADVERTISEMENT

ತಾವೆದುರಿಸಿದ 82ನೇ ಎಸೆತವನ್ನು ಕವರ್‌ ಡ್ರೈವ್ ಮೂಲಕ ಬೌಂಡರಿ ಗೆರೆ ದಾಟಿಸಿ ರೂಟ್‌ ಅರ್ಧಶತಕ ಪೂರೈಸಿದರು. ಸರಣಿಯಲ್ಲಿ ಮೊದಲ ಶತಕ ಗಳಿಸುವತ್ತ ಹೆಜ್ಜೆ ಹಾಕಿದ್ದ ರೂಟ್‌ (83; 141 ಎ, 8 ಬೌಂ) ಮಿಚೆಲ್‌ ಸ್ಟಾರ್ಕ್ ಎಸೆತದಲ್ಲಿ ಮಿಚೆಲ್ ಮಾರ್ಷ್ ಸ್ಕ್ವೇರ್‌ಲೆಗ್‌ನಲ್ಲಿ ಪಡೆದ ಮೋಹಕ ಕ್ಯಾಚ್‌ಗೆ ಬಲಿಯಾದರು. ನಂತರ ಮತ್ತೊಮ್ಮೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ದಿನದಾಟದ ಕೊನೆಯ ಓವರ್‌ನಲ್ಲಿ ಜಾನಿ ಬೇಸ್ಟೊ ಅವರ ವಿಕೆಟ್‌ ಕೂಡ ಕಬಳಿಸಿತು. 

ಮೆಲಾನ್‌ಗೆ ಎರಡು ಜೀವದಾನ
ಒಂದು ಬಾರಿ ರನ್‌ ಔಟ್‌ನಿಂದ ಬಚಾವಾದ ಡೇವಿಡ್ ಮೆಲಾನ್‌ ಮತ್ತೊಮ್ಮೆ ಸ್ಟೀವ್ ಸ್ಮಿತ್ ಕ್ಯಾಚ್‌ ಕೈಚೆಲ್ಲಿದ್ದರಿಂದ ಜೀವದಾನ ಪಡೆದರು. 160 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 55 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

28 ರನ್ ಗಳಿಸಿದ್ದಾಗ ಚೆಂಡನ್ನು ಬ್ಯಾಕ್‌ವರ್ಡ್‌ ಪಾಯಿಂಟ್‌ ಕಡೆಗೆ ಚೆಂಡನ್ನು ಕಟ್ ಮಾಡಿ ರನ್ ಗಳಿಸಲು ಪ್ರಯತ್ನಿಸಿದಾಗ ಗೊಂದಲ ಉಂಟಾಯಿತು. ಆದರೆ ವಿಕೆಟ್‌ ಕೀಪರ್ ಟಿಮ್ ಪೈನೆ ಅವರ ಎಸೆತ ಸ್ಟಂಪ್‌ಗೆ ತಾಗದ ಕಾರಣ ಬಚಾವಾದರು.

34 ರನ್‌ ಗಳಿಸಿದ್ದಾಗ ನೇಥನ್ ಲಿಯಾನ್ ಅವರ ಎಸೆತದಲ್ಲಿ ನೀಡಿದ ಕ್ಯಾಚ್‌ ಪಡೆಯಲು ಸ್ಮಿತ್ ವಿಫಲರಾದರು. ಕಳೆದ ಪಂದ್ಯದಲ್ಲಿ ಅಲೆಸ್ಟರ್ ಕುಕ್ ಅವರ ಕ್ಯಾಚ್ ಕೂಡ ಸ್ಮಿತ್ ನೆಲಕ್ಕೆ ಚೆಲ್ಲಿದ್ದರು. ನಂತರ ಕುಕ್‌ ದ್ವಿಶತಕ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌, ಮೊದಲ ಇನಿಂಗ್ಸ್‌:
81.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 233 (ಅಲೆಸ್ಟರ್ ಕುಕ್‌ 39, ಮಾರ್ಕ್‌ ಸ್ಟೋನ್‌ಮ್ಯಾನ್‌ 24, ಜೇಮ್ಸ್ ವಿನ್ಸ್‌ 25, ಜೋ ರೂಟ್‌ 83, ಡೇವಿಡ್ ಮೆಲಾನ್‌ ಔಟಾಗದೆ 55; ಮಿಚೆಲ್ ಸ್ಟಾರ್ಕ್‌ 63ಕ್ಕೆ1, ಜೊಶ್‌ ಹ್ಯಾಜಲ್‌ವುಡ್‌ 47ಕ್ಕೆ2, ಪ್ಯಾಟ್ ಕಮಿನ್ಸ್‌ 44ಕ್ಕೆ2). ಆಸ್ಟ್ರೇಲಿಯಾ ಎದುರಿನ ಪಂದ್ಯ.

*


ಇಂಗ್ಲೆಂಡ್ ತಂಡದ ಜಾನಿ ಬೇಸ್ಟೊ ವಿಕೆಟ್ ಕಬಳಿಸಿದ ಜೋಶ್ ಹ್ಯಾಜಲ್‌ವುಡ್‌ (ಎಡದಿಂದ ಎರಡನೆಯವರು) ಅವರನ್ನು ಸಹ ಆಟಗಾರರು ಅಭಿನಂದಿಸಿದರು. –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.