ADVERTISEMENT

23ರಿಂದ ರಾಷ್ಟ್ರಮಟ್ಟದ ಶೂಟಿಂಗ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST

ಹುಬ್ಬಳ್ಳಿ: ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಆಕಾಡೆಮಿಯು (ಎಚ್‌ಎಸ್‌ಎಸ್‌ಎ) ಜ. 23ರಿಂದ 30ರವರೆಗೆ ವಾಣಿಜ್ಯನಗರಿಯಲ್ಲಿ ರಾಷ್ಟ್ರಮಟ್ಟದ ಹುಬ್ಬಳ್ಳಿ ಓಪನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸಿದೆ.

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಮುಖ್ಯ ಕೋಚ್‌ ರವಿಚಂದ್ರ ಬಾಳೆಹೊಸೂರ, ‘ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸಲಾಗಿದೆ. ಒಲಿಂಪಿಯನ್‌ಗಳಾದ ಪ್ರಕಾಶ ನಂಜಪ್ಪ, ಸುಮಾ ಶಿರೂರ, ಅಂತರರಾಷ್ಟ್ರೀಯ ಶೂಟರ್‌ಗಳಾದ ಟಿ.ಸಿ. ಪಳಂಗಪ್ಪ, ಸುಬ್ಬಯ್ಯ, ಮಂಜುನಾಥ ಪಟೇಗಾರ ಸೇರಿದಂತೆ 400 ಶೂಟರ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದರು.

‘ಏರ್‌ ರೈಫಲ್‌, ಏರ್‌ ಪಿಸ್ತೂಲ್‌ ಮತ್ತು ಓಪನ್‌ ಸೈಟ್‌ ರೈಫಲ್‌ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಮೊದಲ ಎರಡು ವಿಭಾಗಗಲ್ಲಿ ಮೊದಲ ಸ್ಥಾನ ಪಡೆದ ಶೂಟರ್‌ಗಳಿಗೆ ತಲಾ ₹ 1 ಲಕ್ಷ ಬಹುಮಾನ ಲಭಿಸುತ್ತದೆ. ಎರಡನೇ ಸ್ಥಾನ ಪಡೆದವರಿಗೆ ತಲಾ ₹ 50 ಸಾವಿರ ಬಹುಮಾನ ನಿಗದಿ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಎಚ್‌ಎಸ್‌ಎಸ್‌ಎ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಬಾಳೆಹೊಸೂರ ಮಾತನಾಡಿ ‘ಅಂಗವಿಕಲರಿಗೂ ಪ್ರತ್ಯೇಕ ರಾಷ್ಟ್ರೀಯ ಓಪನ್‌ ಚಾಲೆಂಜ್‌ ಕಪ್‌ ಸ್ಪರ್ಧೆಗಳು ಇದೇ ವೇಳೆ ನಡೆಯಲಿದ್ದು, ಎಲ್ಲಾ ಸ್ಪರ್ಧೆಗಳು ನಗರದ ಗಂಗೂಬಾಯಿ ಹಾನಗಲ್‌ ಗುರುಕುಲದ ಹತ್ತಿರವಿರುವ ಶೂಟಿಂಗ್‌ ಅಕಾಡೆಮಿಯಲ್ಲಿ ಜರುಗಲಿವೆ. ಅಂಗವಿಕಲರ ವಿಭಾಗಕ್ಕೆ ಏರ್‌ ರೈಫಲ್‌ ಮತ್ತು ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಶೂಟರ್‌ಗೆ ₹ 25 ಸಾವಿರ ಬಹುಮಾನ ಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.