ADVERTISEMENT

‘ರಾಜ್ಯ ತಂಡದ ಆಯ್ಕೆಯಲ್ಲಿ ಪಾರದರ್ಶಕತೆ ಇದೆ’

ರಾಜ್ಯ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಹ್ಯಾರಿಸ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST
‘ರಾಜ್ಯ ತಂಡದ ಆಯ್ಕೆಯಲ್ಲಿ ಪಾರದರ್ಶಕತೆ ಇದೆ’
‘ರಾಜ್ಯ ತಂಡದ ಆಯ್ಕೆಯಲ್ಲಿ ಪಾರದರ್ಶಕತೆ ಇದೆ’   

ಬೆಂಗಳೂರು: ‘ರಾಜ್ಯ ಫುಟ್‌ಬಾಲ್‌ ತಂಡದಲ್ಲಿ ಪ್ರತಿಭಾವಂತ ಆಟಗಾರರಿಗೆ ಮಾತ್ರ ಸ್ಥಾನ ನೀಡಲಾಗಿದೆ. ನಾವು ಯಾರ ಲಾಬಿಗೂ ಮಣಿಯದೆ ಪಾರದರ್ಶಕವಾಗಿ ತಂಡವನ್ನು ಆಯ್ಕೆ ಮಾಡಿದ್ದೇವೆ’ ಎಂದು ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ತಿಳಿಸಿದರು.

ಬುಧವಾರ ನಡೆದ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ನೂತನ ಲಾಂಛನ ಮತ್ತು ಸಂತೋಷ್‌ ಟ್ರೋಫಿಯಲ್ಲಿ ಭಾಗವಹಿಸಲಿರುವ ರಾಜ್ಯ ಪುರುಷರ ತಂಡದ ನೂತನ ‍‍ಪೋಷಾಕು ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರ್ಹತೆ ಇಲ್ಲದಿದ್ದರೂ ಇನ್‌ಕಮ್‌ ಟ್ಯಾಕ್ಸ್‌ನ ಆಟಗಾರನೊಬ್ಬನಿಗೆ ರಾಜ್ಯ ತಂಡದಲ್ಲಿ ಸ್ಥಾನ ನೀಡಲಾಗಿದೆಯಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಹ್ಯಾರಿಸ್‌ ‘ಕೆಎಸ್‌ಎಫ್‌ಎ ಆಯ್ಕೆ ಸಮಿತಿ, ತಂಡದ ಆಯ್ಕೆ ವಿಚಾರದಲ್ಲಿ ಮೊದಲಿನಿಂದಲೂ ಪಾರದರ್ಶಕತೆ ಕಾಪಾಡಿಕೊಂಡು ಬಂದಿದೆ. ಅರ್ಹತೆ ಇಲ್ಲದವರಿಗೆ ನಾವು ಯಾವತ್ತೂ ತಂಡದಲ್ಲಿ ಸ್ಥಾನ ಕಲ್ಪಿಸಿಲ್ಲ. ಟ್ರಯಲ್ಸ್‌ನಲ್ಲಿ ಮೂಡಿಬರುವ ಸಾಮರ್ಥ್ಯವನ್ನು ಮಾನದಂಡವಾಗಿಟ್ಟುಕೊಂಡು ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿಯೂ ಇದೇ ನಿಯಮ ಪಾಲಿಸಿದ್ದೇವೆ. ಇನ್ನೆರಡು ದಿನ ಗಳಲ್ಲಿ ಸಂತೋಷ್‌ ಟ್ರೋಫಿಗೆ ಅಂತಿಮ ತಂಡ ಪ್ರಕಟಿಸುತ್ತೇವೆ. ಅದರಲ್ಲಿ ಅನರ್ಹರು ಇದ್ದರೆ ನೇರವಾಗಿ ನನಗೆ ದೂರು ನೀಡಬಹುದು’ ಎಂದರು.

48 ವರ್ಷಗಳ ನಂತರ ಬೆಂಗಳೂರಿನಲ್ಲಿ ಟೂರ್ನಿ: ಈ ಬಾರಿಯ ಸಂತೋಷ್‌ ಟ್ರೋಫಿಯ ದಕ್ಷಿಣ ವಲಯದ ಅರ್ಹತಾ ಪಂದ್ಯಗಳು ಜನವರಿ 17ರಿಂದ 22ರವರೆಗೆ ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಜರುಗಲಿವೆ. 48 ವರ್ಷಗಳ ನಂತರ ಬೆಂಗಳೂರಿನಲ್ಲಿ ಟೂರ್ನಿ ಆಯೋಜನೆಯಾಗಿದೆ. ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು ಇವುಗಳನ್ನು ‘ಎ’ ಮತ್ತು ‘ಬಿ’ ಗುಂಪುಗಳನ್ನಾಗಿ ವಿಭಾಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.