ADVERTISEMENT

ಚಾಂಪಿಯನ್ನರಿಗೆ ನಾರ್ತ್ ಈಸ್ಟ್ ಸವಾಲು

ಪಿಟಿಐ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST
ನಾರ್ತ್‌ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಎಟಿಕೆ (ಬಲ) ತಂಡದ ಆಟಗಾರರು ಮಿಂಚುವ ಭರವಸೆಯಲ್ಲಿದ್ದಾರೆ
ನಾರ್ತ್‌ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಎಟಿಕೆ (ಬಲ) ತಂಡದ ಆಟಗಾರರು ಮಿಂಚುವ ಭರವಸೆಯಲ್ಲಿದ್ದಾರೆ   

ಗುವಾಹಟಿ : ಗೋವಾ ಎಫ್‌ಸಿ ತಂಡವನ್ನು ಮಣಿಸಿ ಟೂರ್ನಿಯ ಮೊದಲ ಗೆಲುವಿನ ಸವಿ ಉಂಡಿರುವ ನಾರ್ತ್‌ ಈಸ್ಟ್‌ ಯುನೈಟೆಡ್ ಎಫ್‌ಸಿ ತಂಡ ಮತ್ತೊಂದು ಜಯದ ಹಂಬಲದಲ್ಲಿದೆ.

ಕಳೆದ ಶನಿವಾರ ಇಲ್ಲಿನ ಇಂದಿರಾಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡವನ್ನು ನಾರ್ತ್ ಈಸ್ಟ್‌ ಯುನೈಟೆಡ್‌ 2–1ರಿಂದ ಸೋಲಿಸಿತ್ತು. ಇದೇ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಎಟಿಕೆ ವಿರುದ್ಧದ ಪಂದ್ಯ ನಡೆಯಲಿದೆ.

ಬೆಂಗಳೂರಿನಲ್ಲಿ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ 0–1ರಿಂದ ಸೋತಿರುವ ಕಳೆದ ಬಾರಿಯ ಚಾಂಪಿಯನ್‌ ಎಟಿಕೆ ಜಯದ ಲಯಕ್ಕೆ ಮರಳುವ ಹುಮ್ಮಸ್ಸಿನಲ್ಲಿದೆ. ಈ ಬಾರಿ ಈ ತಂಡ ಇನ್ನೂ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಎಂಟು ಪಂದ್ಯಗಳ ಪೈಕಿ ಆರರಲ್ಲಿ ಮಾತ್ರ ಗೆದ್ದಿದೆ. ಮೂರರಲ್ಲಿ ಡ್ರಾ ಸಾಧಿಸಿದೆ. ಪ್ಲೇ ಆಫ್ ಹಂತಕ್ಕೇರುವ ಕನಸು ಕಾಣಬೇಕಾದರೆ ಶುಕ್ರವಾರದ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ADVERTISEMENT

‘ಸೋಲು ಮತ್ತು ಗೆಲುವು ಕ್ರೀಡೆಯ ಭಾಗ. ಈಗಿನ ಸ್ಥಿತಿಯಿಂದ ಹೊರಬರಲು ತಂಡ ಪ್ರಯತ್ನಿಸಲಿದೆ. ಪ್ಲೇ ಆಫ್ ಹಂತ ಪ್ರವೇಶಿಸುವ ಭರವಸೆಯನ್ನು ಕಳೆದುಕೊಳ್ಳಲಿಲ್ಲ’ ಎಂದು ಎಟಿಕೆ ಸಹಾಯಕ ಕೋಚ್ ಬಸ್ತೊಬ್ ರಾಯ್ ಹೇಳಿದರು.

‘ಅದೃಷ್ಟ ಕೈಕೊಟ್ಟ ಕಾರಣ ಈ ವರೆಗೆ  ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ. ಆದರೂ ಸತತ ಎರಡು ಪಂದ್ಯಗಳನ್ನು ಗೆದ್ದರೆ ಪಾಯಿಂಟ್‌ ಪಟ್ಟಿಯಲ್ಲಿ ಸಾಕಷ್ಟು ಮೇಲಕ್ಕೇರುವ ಸಾಧ್ಯತೆ ಇದೆ. ಈಗ ಹಿಂದಿನ ಸೋಲುಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಕಠಿಣ ಪರಿಶ್ರಮ ತಂಡದ ಮುಂದಿರುವ ದಾರಿ. ಇದನ್ನು ಅರಿತು ಆಟಗಾರರು ಕಣಕ್ಕೆ ಇಳಿಯಲಿದ್ದಾರೆ’ ಎಂದು ಅವರು ಹೇಳಿದರು.

ಗೋವಾ ವಿರುದ್ಧ ಬಳಸಿದ ತಂತ್ರಗಳನ್ನೇ ಎಟಿಕೆ ವಿರುದ್ಧವೂ ಬಳಸಲು ನಾರ್ತ್ ಈಸ್ಟ್‌ ತಂಡದ ಮುಂದಾಗಿದೆ. ‘ಸತತ ನಾಲ್ಕು ಸೋಲುಗಳ ನಂತರ ಎಫ್‌ಸಿ ಗೋವಾ ವಿರುದ್ಧ ನಾರ್ಥ್‌ ಈಸ್ಟ್ ಜಯಿಸಿತ್ತು. ಎಟಿಕೆ ವಿರುದ್ಧ ಗೆದ್ದರೆ ತಂಡಕ್ಕೆ ಮತ್ತಷ್ಟು ಪ್ರೇರಣೆ ಸಿಗಲಿದೆ’ ಎಂದು ತಂಡದ ತಾಂತ್ರಿಕ ನಿರ್ದೇಶಕ ಗ್ರ್ಯಾಂಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.