ADVERTISEMENT

ಎಲಿಮಿನೇಟರ್‌ ಓವರ್‌ನಲ್ಲಿ ಸೋತ ಕರ್ನಾಟಕ

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌: ಮನದೀಪ್‌, ಹರಭಜನ್‌ ಬ್ಯಾಟಿಂಗ್‌ ಮಿಂಚು

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಕರ್ನಾಟಕದ ಆರ್‌.ಸಮರ್ಥ್‌
ಕರ್ನಾಟಕದ ಆರ್‌.ಸಮರ್ಥ್‌   

ಕೋಲ್ಕತ್ತ: ಎಲಿಮಿನೇಟರ್‌ ಓವರ್‌ನಲ್ಲಿ ಪರಿಣಾಮಕಾರಿಯಾಗಿ ಆಡಲು ವಿಫಲ ವಾದ ಕರ್ನಾಟಕ ತಂಡದವರು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಸೂಪರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.

ಜಾಧವಪುರ ವಿಶ್ವವಿದ್ಯಾಲಯದ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರ್‌.ವಿನಯ್‌ ಕುಮಾರ್‌ ಪಡೆ ಪಂಜಾಬ್‌ ತಂಡಕ್ಕೆ ಮಣಿಯಿತು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್‌ 9 ವಿಕೆಟ್‌ ಕಳೆದುಕೊಂಡು 158ರನ್‌ ಗಳಿಸಿದ್ದರಿಂದ ಪಂದ್ಯ ‘ಟೈ’ ಆಯಿತು.

ADVERTISEMENT

ವಿಜೇತರನ್ನು ನಿರ್ಣಯಿಸಲು ‘ಎಲಿಮಿನೇಟರ್‌ ಓವರ್‌’ ಮೊರೆ ಹೋಗಲಾಯಿತು. ಮೊದಲು ಬ್ಯಾಟ್‌ ಮಾಡಿದ ಹರಭಜನ್‌ ಸಿಂಗ್‌ ಬಳಗ ಕೆ.ಗೌತಮ್‌ ಬೌಲ್‌ ಮಾಡಿದ ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 15ರನ್‌ ಗಳಿಸಿತು.

ವಿನಯ್‌ ಪಡೆ ಸಿದ್ದಾರ್ಥ್‌ ಕೌಲ್‌ ಬೌಲ್‌ ಮಾಡಿದ ಓವರ್‌ನಲ್ಲಿ 1 ವಿಕೆಟ್‌ಗೆ 11ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕರ ವೈಫಲ್ಯ: ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಯಂಕ್‌ ಅಗರವಾಲ್‌ (6; 5ಎ, 1ಬೌಂ) ಮತ್ತು ಕರುಣ್‌ ನಾಯರ್‌ (13; 8ಎ, 2ಬೌಂ) ಬೇಗನೆ ವಿಕೆಟ್‌ ನೀಡಿದರು. ಕೆ. ಗೌತಮ್‌ (13; 11ಎ, 3ಬೌಂ) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇವರು ಔಟಾದಾಗ ತಂಡದ ಖಾತೆಯಲ್ಲಿದ್ದದ್ದು 35ರನ್‌.

ಬಳಿಕ ಆರ್‌.ಸಮರ್ಥ್‌ (31; 29ಎ, 4ಬೌಂ) ಮತ್ತು ಸಿ.ಎಂ.ಗೌತಮ್‌ (36; 31ಎ, 1ಬೌಂ, 2ಸಿ) ಬಿರುಸಿನ ಆಟ ಆಡಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಇವರು ಔಟಾದ ನಂತರ ಅನಿರುದ್ಧ್‌ (ಔಟಾಗದೆ 40; 19ಎ, 6ಬೌಂ, 1ಸಿ) ಮತ್ತು ನಾಯಕ ವಿನಯ್‌ (ಔಟಾಗದೆ 15; 9ಎ, 1ಬೌಂ, 1ಸಿ) ಗರ್ಜಿಸಿದರು. ಹೀಗಾಗಿ ತಂಡದ ಮೊತ್ತ 150ರ ಗಡಿ ದಾಟಿತು.

ಗುರಿ ಬೆನ್ನಟ್ಟಿದ ಪಂಜಾಬ್‌ ತಂಡ ಮನನ್‌ ವೊಹ್ರಾ (9) ವಿಕೆಟ್‌ ಬೇಗನೆ ಕಳೆದುಕೊಂಡಿತು. ಮನದೀಪ್‌ ಸಿಂಗ್‌ (45; 29ಎ, 7ಬೌಂ, 1ಸಿ), ಹರಭಜನ್‌ ಸಿಂಗ್‌ (33; 19ಎ, 5ಬೌಂ, 1ಸಿ) ಮತ್ತು ಯುವರಾಜ್‌ ಸಿಂಗ್‌ (29; 25ಎ, 5ಬೌಂ) ಗುಡುಗಿದರು.

ಹೀಗಾಗಿ ತಂಡದ ಖಾತೆಗೆ 12ನೇ ಓವರ್‌ನಲ್ಲಿ 100ರನ್‌ಗಳು ಸೇರ್ಪಡೆಯಾದವು.

ಕೊನೆಯ ಮೂರು ಎಸೆತಗಳಲ್ಲಿ ಪಂಜಾಬ್‌ ಗೆಲುವಿಗೆ 7 ರನ್‌ಗಳು ಬೇಕಿದ್ದವು. ಸಂದೀಪ್‌ ಶರ್ಮಾ (ಔಟಾಗದೆ 6; 5ಎ, 1ಬೌಂ) ಆರು ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158 (ಮಯಂಕ್‌ ಅಗರವಾಲ್‌ 6, ಕರುಣ್‌ ನಾಯರ್‌ 13, ಕೆ.ಗೌತಮ್‌ 13, ಆರ್‌.ಸಮರ್ಥ್‌ 31, ಸಿ.ಎಂ.ಗೌತಮ್‌ 36, ಸ್ಟುವರ್ಟ್‌ ಬಿನ್ನಿ 2, ಅನಿರುದ್ಧ್‌ ಔಟಾಗದೆ 40, ಆರ್‌.ವಿನಯ್‌ ಕುಮಾರ್‌ ಔಟಾಗದೆ 15; ಮನ್‌ಪ್ರೀತ್‌ ಸಿಂಗ್‌ ಗ್ರೆವಾಲ್‌ 8ಕ್ಕೆ2, ಬಲತೇಜ್‌ ಸಿಂಗ್‌ 21ಕ್ಕೆ3, ಹರಭಜನ್‌ ಸಿಂಗ್‌ 27ಕ್ಕೆ1).

ಪಂಜಾಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 158 (ಮನನ್‌ ವೊಹ್ರಾ 9, ಮನದೀಪ್‌ ಸಿಂಗ್‌ 45, ಹರಭಜನ್‌ ಸಿಂಗ್‌ 33, ಯುವರಾಜ್‌ ಸಿಂಗ್‌ 29, ಶರದ್‌ ಲುಂಬಾ 20; ಪ್ರಸಿದ್ಧ ಎಂ.ಕೃಷ್ಣಾ 44ಕ್ಕೆ1, ಎಸ್‌.ಅರವಿಂದ್‌ 32ಕ್ಕೆ4, ಪ್ರವೀಣ್‌ ದುಬೆ 12ಕ್ಕೆ2).

ಎಲಿಮಿನೇಟರ್‌ ಓವರ್‌: ಪಂಜಾಬ್‌: 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 15 (ಮನದೀಪ್‌ ಸಿಂಗ್‌ ಔಟಾಗದೆ 10, ಯುವರಾಜ್‌ ಸಿಂಗ್‌ ಔಟಾಗದೆ 5).
ಕರ್ನಾಟಕ: 1 ಓವರ್‌ನಲ್ಲಿ 1 ವಿಕೆಟ್‌ಗೆ 11 (ಕರುಣ್‌ ನಾಯರ್‌ 8, ಅನಿರುದ್ಧ್‌ ಔಟಾಗದೆ 2; ಸಿದ್ದಾರ್ಥ್‌ ಕೌಲ್‌ 11ಕ್ಕೆ1).
ಫಲಿತಾಂಶ: ಎಲಿಮಿನೇಟರ್‌ ಓವರ್‌ನಲ್ಲಿ ಪಂಜಾಬ್‌ಗೆ 4ರನ್‌ ಗೆಲುವು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.