ADVERTISEMENT

ಹರ್ಮನ್‌ಪ್ರೀತ್‌ಗೆ ನಾಯಕತ್ವ

ಪಿಟಿಐ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್   

ಮುಂಬೈ: ಆಲ್‌ರೌಂಡರ್‌ ಹರ್ಮನ್‌ಪ್ರೀತ್ ಕೌರ್‌ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಟ್ವೆಂಟಿ–20 ಸರಣಿಯಲ್ಲಿ ಭಾರತ ಮಹಿಳೆಯರ ತಂಡದ ಸಾರಥ್ಯ ವಹಿಸಲಿದ್ದಾರೆ.

ಇತ್ತೀಚೆಗೆ ಭಾರತ ಮಹಿಳೆಯರ ತಂಡವನ್ನು ಐಸಿಸಿ ಪ್ರಕಟಿಸಿತ್ತು. ಬುಧವಾರ ಮತ್ತೊಮ್ಮೆ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಮಿಥಾಲಿ ರಾಜ್ ಅವರ ಬದಲಾಗಿ ಹರ್ಮನ್‌ಪ್ರೀತ್‌ಗೆ ತಂಡದ ನಾಯಕತ್ವ ನೀಡಿದೆ. ಸ್ಮೃತಿ ಮಂದಾನ ಉಪನಾಯಕಿಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಐದು ಪಂದ್ಯಗಳ ಸರಣಿ ಫೆಬ್ರುವರಿ 13ರಿಂದ ಆರಂಭವಾಗಲಿವೆ. ಬಳಿಕ ಭಾರತ ಮಹಿಳೆಯರು ಏಕದಿನ ಸರಣಿಯನ್ನೂ ಆಡಲಿದ್ದಾರೆ.  ಆ ಸರಣಿಯಲ್ಲಿ ಮಿಥಾಲಿ ರಾಜ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ADVERTISEMENT

ಮೊದಲು ಪ್ರಕಟಗೊಂಡಿದ್ದ ತಂಡದಲ್ಲಿ ಇರದಿದ್ದ ಅನುಜಾ ಪಾಟೀಲ ಅವರಿಗೆ ಈಗ ಸ್ಥಾನ ಲಭಿಸಿದೆ.  ಆಲ್‌ರೌಂಡರ್ ರಾಧಾ ಯಾದವ್ ಹಾಗೂ ವಿಕೆಟ್‌ಕೀಪರ್ ನುಜಾತ್ ಪರ್ವೀನ್‌ಗೆ ಅವಕಾಶ ಸಿಕ್ಕಿದೆ. ಸುಷ್ಮಾ ವರ್ಮಾ ಅವರನ್ನು ಕೈಬಿಡಲಾಗಿದೆ. ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌, ವೇದಾ ಕೃಷ್ಣಮೂರ್ತಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ತಂಡ ಇಂತಿದೆ: ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಮಿಥಾಲಿ ರಾಜ್‌, ವೇದಾ ಕೃಷ್ಣಮೂರ್ತಿ, ಜಮಿಮಾ ರೋಡ್ರಿಗಸ್‌, ದೀಪ್ತಿ ಶರ್ಮಾ, ಅನುಜಾ ಪಾಟೀಲ್‌, ತನಿಯಾ ಭಾಟಿಯಾ (ವಿಕೆಟ್ ಕೀಫರ್‌), ಜುಜತ್ ಪರ್ವೀನ್‌ (ವಿಕೆಟ್ ಕೀಪರ್‌), ಪೂನಮ್  ಯಾದವ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌.

ದಕ್ಷಿಣ ಆಫ್ರಿಕಾದಲ್ಲಿ ಅಭ್ಯಾಸ: ಮಿಥಾಲಿ

‘ದಕ್ಷಿಣ ಆಫ್ರಿಕಾಕ್ಕೆ ಬೇಗನೆ ಪ್ರಯಾಣ ಮಾಡಲಿರುವ ಭಾರತ ಮಹಿಳೆಯರ ತಂಡ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಅಭ್ಯಾಸ ನಡೆಸಲಿದೆ’ ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

'ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ ಆಯೋಜನೆಯಾಗಿದ್ದ ವೇಳೆ ಭಾರತ ತಂಡ ಸಾಕಷ್ಟು ಮೊದಲೇ ಅಲ್ಲಿಗೆ ಪ್ರಯಾಣ ಮಾಡಿತ್ತು. ಇದರಿಂದ ಅಲ್ಲಿಯ ವಾತಾವರಣವನ್ನು ಅರಿತುಕೊಂಡು ಉತ್ತಮ ಯೋಜನೆ ರೂಪಿಸಲು ಸಹಾಯ
ವಾಯಿತು’ ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

‘ಎದುರಾಳಿ ತಂಡದೊಂದಿಗೆ ಆಡುವ ಅಭ್ಯಾಸ ಪಂದ್ಯಗಳು ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಈ ಪಂದ್ಯಗಳು ನೆರವಾಗುತ್ತವೆ’ ಎಂದು ಮಿಥಾಲಿ ಹೇಳಿದ್ದಾರೆ.

‘ಯುವ ಆಟಗಾರ್ತಿಯರಿಗೆ ಟ್ವೆಂಟಿ–20 ತಂಡದಲ್ಲಿ ಸ್ಥಾನ ಸಿಕ್ಕಿದೆ. ದಕ್ಷಿಣ ಆಫ್ರಿಕಾದಲ್ಲಿ ಆಡುವುದು ಅಷ್ಟು ಸುಲಭವಲ್ಲ. ಆದ್ದರಿಂದ ಕಠಿಣ ಅಭ್ಯಾಸದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.