ADVERTISEMENT

ಹಾಕಿ: ಭಾರತಕ್ಕೆ ನ್ಯೂಜಿಲೆಂಡ್ ಎದುರು ಜಯ

ಎರಡನೇ ಹಂತದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿ

ಪಿಟಿಐ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಭಾರತದ ಆಟಗಾರರ ಸಂಭ್ರಮ
ಭಾರತದ ಆಟಗಾರರ ಸಂಭ್ರಮ   

ಹ್ಯಾಮಿಲ್ಟನ್‌: ಭಾರತ ಪುರುಷರ ಹಾಕಿ ತಂಡ ಬುಧವಾರದಿಂದ ಇಲ್ಲಿ ಆರಂಭವಾದ ಎರಡನೇ ಹಂತದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಭಾರತ ತಂಡ 3–2 ಗೋಲುಗಳಲ್ಲಿ ನ್ಯೂಜಿಲೆಂಡ್ ಎದುರು ಗೆದ್ದಿದೆ. ಲಲಿತ್ ಉಪಾಧ್ಯಾಯ (7ನೇ ನಿ.), ಹರ್ಜೀತ್‌ ಸಿಂಗ್‌ (32ನೇ ನಿ.), ರೂಪಿಂದರ್ ಪಾಲ್‌ ಸಿಂಗ್‌ (36ನೇ ನಿ.) ಭಾರತದ ಪರ ಗೋಲುಗಳನ್ನು ತಂದಿತ್ತರು. ಎದುರಾಳಿ ತಂಡದ ಡೇನಿಯಲ್ ಹ್ಯಾರಿಸ್‌ (23ನೇ ನಿ.), ಕೇನ್ ರುಸೆಲ್‌ (37ನೇ ನಿ.) ಎರಡು ಗೋಲುಗಳಿಂದ ಪೈಪೋಟಿ ನೀಡಿದರು.

ಪಂದ್ಯದ ಆರಂಭದಿಂದಲೇ ಚುರುಕಿನಿಂದ ಆಡಿದ ಭಾರತ ತಂಡ 7ನೇ ನಿಮಿಷದಲ್ಲಿಯೇ ಗೋಲಿನ ಖಾತೆ ತೆರೆಯಿತು. ಲಲಿತ್ ಉಪಾಧ್ಯಾಯ ಸಿಕ್ಕ ಅಪೂರ್ವ ಅವಕಾಶದಲ್ಲಿ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು.

ADVERTISEMENT

ಎರಡನೇ ಕ್ವಾರ್ಟರ್‌ನಲ್ಲಿ ನ್ಯೂಜಿಲೆಂಡ್ ತಿರುಗೇಟು ನೀಡುವ ಯೋಜನೆಯೊಂದಿಗೆ ಕಣಕ್ಕಿಳಿಯಿತು. ಈ ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್‌ ಎರಡು ಗೋಲುಗಳನ್ನು ತಡೆದರು.

ಭಾರತದ ರಕ್ಷಾಣಾ ಕೋಟೆಯನ್ನು ದಾಟಿದ ನ್ಯೂಜಿಲೆಂಡ್ ತಂಡ 23ನೇ ನಿಮಿಷದಲ್ಲಿ ಸಮಬಲ ಮಾಡಿಕೊಂಡಿತು. ಡೇನಿಯಲ್ ಹ್ಯಾರಿಸ್‌ ಅಮೋಘವಾಗಿ ಗೋಲು ದಾಖಲಿಸಿ ಮಿಂಚಿದರು. ಭಾರತ ತಂಡಕ್ಕೆ ಮನ್‌ದೀಪ್‌ ಸಿಂಗ್ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ತಂದುಕೊಟ್ಟರು.

ಈ ಅವಕಾಶವನ್ನು ಬಳಸಿಕೊಂಡ ಹರ್ಜೀತ್‌ 32ನೇ ನಿಮಿಷದಲ್ಲಿ ಗೋಲು ಗಳಿಸಿದರು. 36ನೇ ನಿಮಿಷದಲ್ಲಿ ರೂಪಿಂದರ್ ಮೂರನೇ ಗೋಲು ತಂದುಕೊಟ್ಟರು. ಕೆಲವೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡ ರುಸೆಲ್ ಚೆಂಡನ್ನು ಗುರಿ ಸೇರಿಸಿದರು.

ಕೊನೆಯ ಕ್ವಾರ್ಟರ್‌ನಲ್ಲಿ ಸಮಬಲ ಸಾಧಿಸಲು ನ್ಯೂಜಿಲೆಂಡ್ ಸಾಕಷ್ಟು ಕಸರತ್ತು ನಡೆಸಿತು. ಆದರೆ ಭಾರತದ ರಕ್ಷಣಾಕೋಟೆಯನ್ನು ದಾಟಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಭಾರತ ತಂಡ ಬೆಲ್ಜಿಯಂ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.