ADVERTISEMENT

ದೋನಿ ನನ್ನ ನೆಚ್ಚಿನ ಆಟಗಾರ

ಹರಾಜು ಪರಿಣತ ರಿಚರ್ಡ್ ಮೆಡ್ಲೆ ಮನದ ಮಾತು

ಗಿರೀಶದೊಡ್ಡಮನಿ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ರಿಚರ್ಡ್ ಮೆಡ್ಲೆ
ರಿಚರ್ಡ್ ಮೆಡ್ಲೆ   

ಬೆಂಗಳೂರು: ‘ಮಹೇಂದ್ರಸಿಂಗ್ ದೋನಿ ನನ್ನ ಅತ್ಯಂತ ಅಚ್ಚುಮೆಚ್ಚಿನ ಆಟಗಾರ. 2008ರಲ್ಲಿ ಮೊಟ್ಟಮೊದಲ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಮೌಲ್ಯ ಪಡೆದ ಆಟಗಾರ ಅವರು’–

ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆಯ ಕೇಂದ್ರಬಿಂದು ರಿಚರ್ಡ್ ಮೆಡ್ಲೆ ಫಿನಾವಾ ಅವರ ಮಾತುಗಳು ಇವು.

ಮೂಗಿನ ಮೇಲೆ ಕನ್ನಡಕ ಧರಿಸಿ, ಒಂದು ಕೈಯಲ್ಲಿ ‘ಚಿನ್ನದ ಸುತ್ತಿಗೆ’ ಮತ್ತೊಂದು ಕೈಯಲ್ಲಿ ಪೆನ್ನು ಹಿಡಿದು ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ಲಂಡನ್‌ನಲ್ಲಿರುವ ಟಿ.ವಿ. ವಾಹಿನಿಗಳಲ್ಲಿ ಪ್ರಾಚೀನ ವಸ್ತುಗಳು, ಕಲಾಕೃತಿಗಳನ್ನು ಹರಾಜು ಮಾಡುವ ಕಾರ್ಯಕ್ರಮ
ಗಳನ್ನು ನಡೆಸಿಕೊಡುವ ರಿಚರ್ಡ್‌ ‘ಹರಾಜು ತಜ್ಞ’ ಎಂದೇ ಜನಪ್ರಿಯರಾಗಿದ್ಧಾರೆ.

ADVERTISEMENT

ಮೊದಲ ಐಪಿಎಲ್‌ನಿಂದ ಇಲ್ಲಿಯವರೆಗೂ ನಡೆದ ಪ್ರತಿಯೊಂದು ಹರಾಜು ಕಾರ್ಯಕ್ರಮವನ್ನೂ  ಇವರೇ ನಡೆಸಿಕೊಟ್ಟಿರುವುದು ದಾಖಲೆ.

ಭಾನುವಾರ 11ನೇ ಆವೃತ್ತಿಯ ಹರಾಜು ಮುಗಿದ ನಂತರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು. ಅದರ ಸಾರಾಂಶ ಇಲ್ಲಿದೆ.

‘ಐಪಿಎಲ್‌ ನನಗೆ ಹಲವು ಅವಿಸ್ಮರಣೀಯ ಅನುಭವಗಳನ್ನು ನೀಡಿದೆ. 2008ರಲ್ಲಿ ಆರಂಭವಾದ ಐಪಿಎಲ್ ಇಡೀ ಕ್ರಿಕೆಟ್ ಲೋಕದ ಸ್ವರೂಪವನ್ನೇ ಬದಲಿಸಿಬಿಟ್ಟಿದೆ. ಹೆಸರೇ ಕೇಳದ ಹಲವು ಹುಡುಗರು ತಾರೆಯರಾಗಿ ಮಿಂಚಿದ್ದು, ಮಧ್ಯಮವರ್ಗದ ಕುಟುಂಬಗಳ ಆಟಗಾರರು ಕೋಟ್ಯಧಿಪತಿಗಳಾಗಿದ್ದನ್ನು ಕಂಡಿದ್ದೇನೆ. ಹಲವು ಬಾರಿ ಅಚ್ಚರಿಗೊಳಗಾಗಿದ್ದೇನೆ. ಅಂತಹ ಒಂದು ಕ್ಷಣ ಇಲ್ಲಿಯೂ ಇತ್ತು. ಐಪಿಎಲ್‌ ಕ್ರಿಕೆಟ್‌ ನ ದಿಗ್ಗಜ ಕ್ರಿಸ್‌ ಗೇಲ್ ಕೊನೆಯವರಾಗಿ ಮಾರಾಟವಾದರು. ಅವರನ್ನು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ₹ 2 ಕೋಟಿಗೆ ಪಡೆದಾಗ ಹಾಲ್‌ನಲ್ಲಿದ್ದ ಹಲವು ಕ್ರಿಕೆಟ್‌ ಪ್ರಿಯರು ಪುಳಕಗೊಂಡು ಚಪ್ಪಾಳೆ ತಟ್ಟಿದರು’ ಎಂದರು.

‘ನನ್ನ ತಂದೆ ಮತ್ತು ಮಾವ ಇಬ್ಬರೂ ಹರಾಜು ತಜ್ಞರಾಗಿದ್ದರು. ಅದೇ ವೃತ್ತಿಯನ್ನು ನಾನೂ ಮಾಡುತ್ತಿದ್ದೇನೆ. ವಿಶ್ವದ ಹಲವೆಡೆ ಸುಪ್ರಸಿದ್ಧ ಕಲಾಕೃತಿಗಳ ಹರಾಜಿಗೆ ಹೋಗುತ್ತೇನೆ. ಅತ್ಯಂತ ಶ್ರೀಮಂತರ ಎದುರು ಹರಾಜು ಕೂಗುತ್ತೇನೆ. ಬೇರೆ ದೇಶಗಳ ಜನರ ಹೆಸರುಗಳನ್ನು ಸರಿಯಾಗಿ ಉಚ್ಚರಿಸುವುದು ಸವಾಲಿನ ಕೆಲಸ. ಒಟ್ಟಾರೆ ಈ ವೃತ್ತಿಯಲ್ಲಿ ಸಂತೃಪ್ತಿ ಕಂಡಿದ್ದೇನೆ. ನನ್ನಂತೆ ಆಗಬಯಸುವ ಕೆಲವು ಯುವಕರಿಗೆ ತರಬೇತಿ ನೀಡುತ್ತಿದ್ದೇನೆ’ ಎಂದು ರಿಚರ್ಡ್ ಹೇಳಿದರು.

‘ಹಲವು ನಗರಗಳನ್ನು ಸುತ್ತಿದ್ದೇನೆ. ಆದರೆ ಬೆಂಗಳೂರಿನಂತಹ ಮತ್ತೊಂದು ಊರು ಇಲ್ಲ. ಇಲ್ಲಿಯ ವಾತಾವರಣ ನನಗೆ ಅತ್ಯಂತ ಪ್ರಿಯ. ಮುಂದಿನ ಬಾರಿ ಹರಾಜು ಪ್ರಕ್ರಿಯೆ ನಡೆದಾಗ ಮತ್ತೆ ಬರುತ್ತೇನೆ’ ಎಂದು ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.