ADVERTISEMENT

ಬೆಂಗಳೂರಿಗೆ ಬಿಸಿಸಿಐ ಕೇಂದ್ರ ಕಚೇರಿ ಸ್ಥಳಾಂತರ?

ಪಿಟಿಐ
Published 5 ಫೆಬ್ರುವರಿ 2018, 19:18 IST
Last Updated 5 ಫೆಬ್ರುವರಿ 2018, 19:18 IST
ಬೆಂಗಳೂರಿಗೆ ಬಿಸಿಸಿಐ ಕೇಂದ್ರ ಕಚೇರಿ ಸ್ಥಳಾಂತರ?
ಬೆಂಗಳೂರಿಗೆ ಬಿಸಿಸಿಐ ಕೇಂದ್ರ ಕಚೇರಿ ಸ್ಥಳಾಂತರ?   

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೇಂದ್ರ ಕಚೇರಿಯನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಕರ್ನಾಟಕ ಸರ್ಕಾರ, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ನಿರ್ಮಾಣಕ್ಕಾಗಿ ಬಿಸಿಸಿಐಗೆ ಬೆಂಗಳೂರಿನ ಹೊರವಲಯದಲ್ಲಿ 40 ಎಕರೆ ಜಮೀನು ಮಂಜೂರು ಮಾಡಿದೆ. ಈ ಜಾಗದಲ್ಲೇ ಬಿಸಿಸಿಐ ಕೇಂದ್ರ ಕಚೇರಿ ತಲೆ ಎತ್ತುವ ನಿರೀಕ್ಷೆ ಇದೆ.

ಈ ಸಂಬಂಧ ಅಭಿಪ್ರಾಯ ತಿಳಿಸುವಂತೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಎಲ್ಲಾ ಸದಸ್ಯರಿಗೆ ಪತ್ರ ಬರೆದಿದ್ದು, ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುವ ಸಂಭವ ಇದೆ.

ADVERTISEMENT

‘ವಾಂಖೆಡೆ ಕ್ರೀಡಾಂಗಣದ ಕ್ರಿಕೆಟ್‌ ಸೆಂಟರ್‌ನಲ್ಲಿ ಇರುವ ಬಿಸಿಸಿಐ ಕಚೇರಿಯಲ್ಲಿ ಆಧುನಿಕ ಸೌಲಭ್ಯಗಳಿಲ್ಲ ಎಂದು ಕೆಲವರು ದೂರಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಎನ್‌ಸಿಎ ನಿರ್ಮಾಣ ಮಾಡಲು ಸಿಕ್ಕಿರುವ 40 ಎಕರೆ ಜಾಗ, ವಿಮಾನ ನಿಲ್ದಾಣದ ಸಮೀಪವಿದ್ದು, ಅಲ್ಲೇ ಬಿಸಿಸಿಐ ಕೇಂದ್ರ ಕಚೇರಿಗಾಗಿ ಅತ್ಯಾಧುನಿಕ ಸೌಕರ್ಯ ಗಳನ್ನೊಳಗೊಂಡ ಕಟ್ಟಡ ನಿರ್ಮಿಸುವ ಚಿಂತನೆ ಇದೆ. ಉದ್ದೇಶಿತ  ಕಟ್ಟದಲ್ಲೇ ಬಿಸಿಸಿಐ ಸಭೆಗಳನ್ನು ನಡೆಸಬಹುದು. ಇದರಿಂದ ಈಗ ಹೋಟೆಲ್‌ಗಳಲ್ಲಿ ಸಭೆ ನಡೆಸುವಾಗ ವ್ಯಯಿಸುವ ಲಕ್ಷಾಂತರ ಹಣ ಉಳಿತಾಯವಾಗಲಿದೆ. ಜೊತೆಗೆ ಕಚೇರಿಗೆ ಹೊಂದಿಕೊಂಡಂತೆ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಬಾಡಿಗೆ ನೀಡಿದರೆ ಅದರಿಂದಲೂ ಆದಾಯ ಗಳಿಸಬಹುದು’ ಎಂದು ಖನ್ನಾ, ಪತ್ರದಲ್ಲಿ ತಿಳಿಸಿದ್ದಾರೆ.

‘ಎನ್‌ಸಿಎ ಜಾಗದಲ್ಲಿ ಸುಸಜ್ಜಿತ ವಸತಿ ಕಟ್ಟಡಗಳನ್ನು ನಿರ್ಮಿಸುವ ಆಲೋಚನೆಯೂ ಇದೆ. ಬಿಸಿಸಿಐನ ಅಧಿಕಾರಿಗಳು, ಆಟಗಾರರು ಮತ್ತು ಗಣ್ಯರು ಇವುಗಳಲ್ಲಿ ತಂಗಬಹುದು. ಇದರಿಂದಲೂ ಸಾಕಷ್ಟು ಹಣ ಉಳಿಸಬಹುದು’ ಎಂದು ಖನ್ನಾ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.