ADVERTISEMENT

ಸಮಬಲ ಗಳಿಸಿಕೊಟ್ಟ ಅಂಕಿತಾ

ಪಿಟಿಐ
Published 7 ಫೆಬ್ರುವರಿ 2018, 20:10 IST
Last Updated 7 ಫೆಬ್ರುವರಿ 2018, 20:10 IST
ಸಮಬಲ ಗಳಿಸಿಕೊಟ್ಟ ಅಂಕಿತಾ
ಸಮಬಲ ಗಳಿಸಿಕೊಟ್ಟ ಅಂಕಿತಾ   

ನವದೆಹಲಿ: ಒತ್ತಡ ಮೆಟ್ಟಿ ನಿಂತು ಅಮೋಘ ಆಟದ ಮೂಲಕ ಎದುರಾಳಿಯನ್ನು ಮಣಿಸಿದ ಅಂಕಿತಾ ರೈನಾ ಫೆಡ್‌ ಕಪ್‌ ಏಷ್ಯಾ ಒಸಿನಿಯಾ ವಲಯದ ‘ಎ’ ಗುಂಪಿನ ಹಣಾಹಣಿಯ ಮೊದಲ ದಿನ ಭಾರತಕ್ಕೆ ಸಮಬಲ ಗಳಿಸಿಕೊಟ್ಟರು.

ಡೆಲ್ಲಿ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಭರವಸೆಯ ಆಟಗಾರ್ತಿ ಕರ್ಮನ್‌ಕೌರ್ ಥಂಡಿ ಆರಂಭದಲ್ಲಿ ಸೋತು ನಿರಾಸೆ ಕಂಡರು. ಇದರಿಂದ ಎದೆಗುಂದದ ವಿಶ್ವದ 253ನೇ ಕ್ರಮಾಂಕದ ಆಟಗಾರ್ತಿ ಅಂಕಿತಾ 120ನೇ ಕ್ರಮಾಂಕದ ಲಿನ್‌ ಜು ಅವರನ್ನು 6–3, 6–2ರಿಂದ ಮಣಿಸಿ ಭಾರತ 1–1ರ ಸಮಬಲ ಸಾಧಿಸುವಂತೆ ಮಾಡಿದರು.

ಆರಂಭದಲ್ಲೇ ಪರಿಣಾಮಕಾರಿ ಆಟವಾಡಿದ ಅಂಕಿತಾ ಬಲಿಷ್ಠ ಎದುರಾಳಿಗೆ ಅಚ್ಚರಿ ಮೂಡಿಸಿದರು. ಕಳೆದ ಮೂರು ಬಾರಿ ಎದುರಾದಾಗ ಲಿನ್ ವಿರುದ್ಧ ಸೋತಿದ್ದ ಅಂಕಿತಾ ಬುಧವಾರ ಪ್ರತೀಕಾರ ತೀರಿಸಿದರು.

ADVERTISEMENT

ಮೊದಲ ಸೆಟ್‌ನ ಮೊದಲ ಗೇಮನ್‌ನಲ್ಲಿ ಭಾರತದ ಆಟಗಾರ್ತಿಯ ಸರ್ವ್ ಮುರಿಯಲು ಲಿನ್‌ ಭಾರಿ ಪ್ರಯತ್ನಪಟ್ಟರು. ಆದರೆ ಇದಕ್ಕೆ ಫಲ ಸಿಗಲಿಲ್ಲ. ನಾಲ್ಕನೇ ಗೇಮ್‌ನಲ್ಲಿ ಪ್ರಬಲ ಹೋರಾಟ ಕಂಡು ಬಂತು. ಆದರೆ ಕೊನೆಗೆ ಅಂಕಿತಾ ಮೇಲುಗೈ ಸಾಧಿಸಿದರು.

ಮೋಹಕ ಬ್ಯಾಕ್‌ಹ್ಯಾಂಡ್‌ ಹೊಡೆತ ಗಳ ಮೂಲಕ ರಂಜಿಸಿದ ಅಂಕಿತಾ ಆಗಾಗ ನೆಲಮಟ್ಟದಲ್ಲಿ ಚೆಂಡನ್ನು ತೂರಿಬಿಟ್ಟು ಎದುರಾಳಿಯನ್ನು ಕಂಗೆಡಿ ಸಿದರು. ಹೀಗಾಗಿ 5–2ರ ಸ್ಪಷ್ಟ ಮುನ್ನಡೆ ಸಾಧಿಸಲು ಅವರಿಗೆ ಸಾಧ್ಯವಾಯಿತು. ಕೊನೆಯಲ್ಲಿ ಲಿನ್‌ ಭಾರಿ ಪ್ರತಿರೋಧ ಒಡ್ಡಿದರು. ಆದರೆ ಸೆಟ್‌ ಗೆಲ್ಲಲು ಅಂಕಿತಾಗೆ ಪ್ರಯಾಸವಾಗಲಿಲ್ಲ.

ಎರಡನೇ ಸೆಟ್‌ನಲ್ಲಿ ಮೊದಲ ಗೇಮ್‌ನಲ್ಲಿ ಚೀನಾ ಆಟಗಾರ್ತಿ ಪರಿಣಾಮಕಾರಿ ಬ್ಯಾಕ್‌ಹ್ಯಾಂಡ್ ಹೊಡೆ ತಗಳ ಮೂಲಕ ಮೇಲುಗೈ ಸಾಧಿಸಿದರು. ಪಂದ್ಯದಲ್ಲಿ ಮೊದಲ ಬಾರಿ ಭಾರತದ ಆಟಗಾರ್ತಿಯ ಸರ್ವ್‌ ಮುರಿದ ಅವರು ಮುನ್ನಡೆ ಸಾಧಿಸುವ ಭರವಸೆ ಮೂಡಿಸಿದರು. ಆದರೆ ಪ್ರತಿತಂತ್ರ ಹೂಡಿದ ಅಂಕಿತಾ ಡ್ರಾಪ್‌ಶಾಟ್‌ಗಳ ಮೂಲಕ ಪಾಯಿಂಟ್‌ ಕಬಳಿಸಿದರು.

ನಂತರ ಹಿಂದಿರುಗಿ ನೋಡದ ಅವರು ಸೆಟ್‌ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಡಬಲ್ಸ್‌ನಲ್ಲಿ ಅಂಕಿತಾ ಅವರು ಪ್ರಾರ್ಥನಾ ತೊಂಬರೆ ಜೊತೆಗೆ ವಾಂಗ್‌ ಮತ್ತು ಜಾಕ್ಸಂಗ್ ಯಾಂಗ್ ಅವರನ್ನು ಎದುರಿಸುವರು.

ಕರ್ಮನ್‌ಕೌರ್‌ಗೆ ನಿರಾಸೆ: ಮೊದಲ ಪಂದ್ಯದಲ್ಲಿ ಕರ್ಮನ್ ಕೌರ್ ಥಂಡಿ ಸೋತು ಭಾರತ ಪಾಳಯದಲ್ಲಿ ನಿರಾಸೆ ಮೂಡಿಸಿದರು. ಅವರನ್ನು ಯಫಾನ್ ವಾಂಗ್‌ 6–2, 6–2ರಿಂದ ಮಣಿಸಿದರು.

ಮಂಗಳವಾರ ಬೆಳಿಗ್ಗೆಯಷ್ಟೇ ಚೀನಾ ತಂಡದವರು ಭಾರತಕ್ಕೆ ಬಂದಿಳಿದಿದ್ದರು. ಇದರಿಂದ ಯಫಾನ್‌ ಆಟದ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ.

ಥೈಪೆ ಓಪನ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದ ಅವರು ಕರ್ಮನ್‌ಗೆ ಯಾವ ಹಂತದಲ್ಲೂ ಹಿಡಿತ ಸಾಧಿಸಲು ಬಿಡಲಿಲ್ಲ.

ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರಗ ಳನ್ನು ಹೂಡಲು ಪ್ರಯತ್ನಿಸಿದರೂ ಕರ್ಮ್‌ನ್‌ ಅದರಲ್ಲಿ ಸಫಲರಾಗಲಿಲ್ಲ. ಮೊದಲ ಸೆಟ್‌ನ ಎರಡನೇ ಗೇಮ್‌ ಮತ್ತು ಎರಡನೇ ಸೆಟ್‌ನ ಆರನೇ ಗೇಮ್‌ನಲ್ಲಿ ಎರಡು ಬಾರಿ ಚೀನಾ ಆಟಗಾರ್ತಿಯ ಸರ್ವ್ ಮುರಿಯಲು ಪ್ರಯತ್ನಿಸಿದರು. ಆದರೆ ಎದೆಗುಂದದ ಯಫಾನ್‌ ನಿರಾಯಾಸವಾಗಿ ಪಾಯಿಂಟ್ ಗಳಿಸಿದರು.

ಯಫಾನ್ ವಾಂಗ್‌ ಎದುರು 6–2, 6–2ರಿಂದ ಸೋತ ಕರ್ಮನ್ ಕೌರ್ ಥಂಡಿ

ಲಿನ್‌ ಜು ಅವರನ್ನು 6–3, 6–2ರಿಂದ ಮಣಿಸಿದ ಅಂಕಿತಾ ರೈನಾ

ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಅಂಕಿತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.