ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ಸರಣಿ: ಮಿಥಾಲಿ ಬಳಗಕ್ಕೆ ಕ್ಲೀನ್‌ಸ್ವೀಪ್‌ ವಿಶ್ವಾಸ

ಪಿಟಿಐ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST
ಮಿಥಾಲಿ ರಾಜ್‌
ಮಿಥಾಲಿ ರಾಜ್‌   

ಪೊಚೆಫ್‌ಸ್ಟ್ರೂಮ್‌: ಸರಣಿ ಗೆದ್ದು ಬೀಗುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡದವರು ಕ್ಲೀನ್ ಸ್ವೀಪ್ ಕನಸು ಹೊತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಶನಿವಾರ ಇಲ್ಲಿನ ಸೆನ್ವಸ್ ಪಾರ್ಕ್‌ ಕ್ರೀಡಾಂಗಣದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಕಳೆದ ವರ್ಷ ನಡೆದ ಮಹಿಳೆಯ ವಿಶ್ವಕಪ್‌ ಪಂದ್ಯದಲ್ಲಿ ಭಾರತವನ್ನು ಮಣಿಸಿದ ದಕ್ಷಿಣ ಆಫ್ರಿಕಾ ಈಗ ಸ್ವಂತ ನೆಲದಲ್ಲಿ ಪರದಾಡುತ್ತಿದೆ. ಮೊದಲ ಎರಡು ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್‌ ತೀರಾ ಕಳಪೆಯಾಗಿತ್ತು. ಎರಡೂ ಪಂದ್ಯಗಳಲ್ಲಿ ಗುರಿ ಬೆನ್ನತ್ತಿದ ತಂಡ ತಲಾ 125 ಮತ್ತು 124 ರನ್‌ಗಳಿಗೆ ಆಲೌಟಾಗಿತ್ತು. ‌

ಭಾರತದ ವೇಗದ ಬೌಲರ್‌ ಜೂಲನ್ ಗೋಸ್ವಾಮಿ ಮತ್ತು ಲೆಗ್ ಸ್ಪಿನ್ನರ್‌ ಪೂನಮ್ ಯಾದವ್‌ ಎದುರಾಳಿ ತಂಡವನ್ನು ಮೊನಚಾದ ಬೌಲಿಂಗ್ ಮೂಲಕ ಕಾಡಿದ್ದರು. ಉಳಿದ ಬೌಲರ್‌ಗಳು ಕೂಡ ಇವರಿಗೆ ಉತ್ತಮ ಸಹಕಾರ ನೀಡಿದ್ದಾರೆ.

ADVERTISEMENT

ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಅಪೂರ್ವ ಫಾರ್ಮ್‌ನಲ್ಲಿದ್ದು ಎರಡು ಪಂದ್ಯಗಳಲ್ಲಿ ಕ್ರಮವಾಗಿ 84 ಮತ್ತು 135 ರನ್‌ ಗಳಿಸಿದ್ದಾರೆ. ಅವರ ಆರಂಭಿಕ ಜೋಡಿ ಪೂನಮ್‌ ರಾವತ್‌ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಆದ್ದರಿಂದ ಫಾರ್ಮ್‌ಗೆ ಮರಳಲು ಅವರಿಗೆ ಮೂರನೇ ಪಂದ್ಯ ಸಹಕಾರಿಯಾಗಲಿದೆ.

ಮೊದಲ ಪಂದ್ಯದಲ್ಲಿ ನಿರಾಸೆ ಕಂಡ ಹರ್ಮನ್‌ಪ್ರೀತ್ ಕೌರ್ ಮತ್ತು ವೇದಾ ಕೃಷ್ಣಮೂರ್ತಿ ಕಿಂಬರ್ಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕ್ರಮವಾಗಿ ಅರ್ಧ ಶತಕ ಗಳಿಸಿ ಮಿಂಚಿದ್ದಾರೆ. ಅಂತಿಮ ಪಂದ್ಯದಲ್ಲೂ ಅವರು ಉತ್ತಮ ಸಾಮರ್ಥ್ಯ ತೋರಿದರೆ ತಂಡದ ಗೆಲುವು ಸುಲಭವಾಗಲಿದೆ.

ತಂಡಗಳು

ಭಾರತ: ಮಿಥಾಲಿ ರಾಜ್‌ (ನಾಯಕಿ), ತನಿಯಾ ಭಾಟಿಯಾ (ವಿಕೆಟ್ ಕೀಪರ್‌), ಏಕ್ತಾ ಬಿಶ್ಟ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೇಶ್ರಮ್‌, ಶಿಖಾ ಪಾಂಡೆ, ಪೂನಮ್ ರಾವತ್‌, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್‌, ಸುಶ್ಮಾ ವರ್ಮಾ, ಪೂನಮ್ ಯಾದವ್‌.

ದಕ್ಷಿಣ ಆಫ್ರಿಕಾ: ಡೇನ್‌ ವ್ಯಾನ್ ನೀಕರ್ಕ್‌ (ನಾಯಕಿ), ಮರಿನೆ ಕಾಪ್‌, ತ್ರಿಶಾ ಚೆಟ್ಟಿ, ಶಬ್ನಿಮ್ ಇಸ್ಮಾಯಿಲ್‌, ಅಯಬೊಂಗಾ ಖಾಕ, ಮಸಬಾಟ ಕ್ಲಾಸ್‌, ಸೂನೆ ಲೂಜ್‌, ಲಾರಾ ವೊಲ್ವಾರ್ಟ್‌, ಮಿಗ್ನನ್‌ ಡು ಪ್ರೀಜ್‌, ಲಿಜೆಲಿ ಲೀ, ಕ್ಲಾ ಟ್ರಯಾನ್‌, ಆ್ಯಂಡ್ರಿ ಸ್ಟೇಯ್ನ್‌, ರೈಸಿಬೆ ಟೊಜಾಕೆ, ಜಿಂಟಲ್ ಮಲಿ.

ಪಂದ್ಯ ಆರಂಭ: ಮಧ್ಯಾಹ್ನ 1.30 (ಭಾರತೀಯ ಕಾಲಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.