ADVERTISEMENT

ಒಂದೇ ಕೈಯಲ್ಲಿ ‘ಈಸಿ ಜಯಿಸಿದ’ ಶಿಕ್ಷಕ

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಿಕ್ಷಕ ಮಂಜುನಾಥ್ ಸಾಧನೆ

ಕೆ.ನರಸಿಂಹ ಮೂರ್ತಿ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಮುರಿದ ಎಡಗೈಯನ್ನು ಮುಂದಕ್ಕೆ ಚಾಚಿ, ಬಲಗೈಯೊಂದರಿಂದಲೇ ನೀರನ್ನು ಹಿಂದಕ್ಕೆ ತಳ್ಳುತ್ತ 45 ವರ್ಷದೊಳಗಿನವರ ಬಟರ್‌ಫ್ಲೈ ಈಜು ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶಿಕ್ಷಕ ಮಂಜುನಾಥ್. –ಪ್ರಜಾವಾಣಿ ಚಿತ್ರ/ಟಿ.ರಾಜನ್‌
ಮುರಿದ ಎಡಗೈಯನ್ನು ಮುಂದಕ್ಕೆ ಚಾಚಿ, ಬಲಗೈಯೊಂದರಿಂದಲೇ ನೀರನ್ನು ಹಿಂದಕ್ಕೆ ತಳ್ಳುತ್ತ 45 ವರ್ಷದೊಳಗಿನವರ ಬಟರ್‌ಫ್ಲೈ ಈಜು ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶಿಕ್ಷಕ ಮಂಜುನಾಥ್. –ಪ್ರಜಾವಾಣಿ ಚಿತ್ರ/ಟಿ.ರಾಜನ್‌   

ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಅಂಗವಾಗಿ, ನಗರದ ಕ್ರೀಡಾಸಂಕೀರ್ಣದ ಈಜುಕೊಳದಲ್ಲಿ ಭಾನುವಾರ ಈಜು ಸ್ಪರ್ಧೆ ನಡೆದಿತ್ತು. ಬಟರ್‌ಫ್ಲೈ ವಿಭಾಗದ ಸ್ಪರ್ಧೆ ಆರಂಭವಾದ ಕೂಡಲೇ ಕೊಳಕ್ಕೆ ಜಿಗಿದ ಸ್ಪರ್ಧಿಯೊಬ್ಬರು ಬಲಗೈಯೊಂದರಿಂದಲೇ ನೀರನ್ನು ನೂಕುತ್ತಾ ಸಹಸ್ಪರ್ಧಿಗಳನ್ನು ಹಿಂದಿಕ್ಕಿ ಮುಂದೆ ಸಾಗಿದರು. ಅಲ್ಲಿದ್ದವರಲ್ಲಿ ಪ್ರಶ್ನೆ ಮೂಡಿತು; ಅವರ ಇನ್ನೊಂದು ಕೈಗೆ ಏನಾಗಿದೆ?

ಬಲಗೈಯನ್ನು ಮಾತ್ರ ಬಳಸಿ, ತಮ್ಮ ಎಡಗೈಯನ್ನು ನೀರಿನಲ್ಲಿ ಮುಂದಕ್ಕೆ ಚಾಚಿಕೊಂಡೇ ಸ್ಪರ್ಧೆಯನ್ನು ಗೆದ್ದಿದ್ದು ಅವರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತ್ತು.

45 ವರ್ಷದೊಳಗಿನವರ 100 ಮೀಟರ್‌ ವಿಭಾಗದಲ್ಲಿ ಮೊದಲು ಗುರಿ ಮುಟ್ಟಿ ಈಜುಕೊಳದಿಂದ ಮೇಲಕ್ಕೆ ಬಂದಾಗಲೂ ಅವರ ಎಡಗೈ ನೀಳವಾಗಿ ಚಾಚಿಕೊಂಡೇ ಇತ್ತು. ಮೊಣಕೈ ಮಡಚಲು ಸಾಧ್ಯವಿರಲಿಲ್ಲ. ಹೀಗೆ ಒಂದೇ ಕೈಯಿಂದ ಈಜಿ, ಗೆದ್ದು ಸಾಧನೆ ಮಾಡಿದವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿಕ್ಕಾಪುರದ ಶಾಲಾ ಶಿಕ್ಷಕ ಮಂಜುನಾಥ್‌.

ADVERTISEMENT

ಹತ್ತು ದಿನಗಳ ಹಿಂದೆ, ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಆಯತಪ್ಪಿ ಬಿದ್ದಿದ್ದ ಅವರ ಎಡ ಮೊಣಕೈ ಮೂಳೆ ಬಿರುಕು ಬಿಟ್ಟಿತ್ತು. ಚಿಕಿತ್ಸೆ ನೀಡಿದ್ದ ವೈದ್ಯರು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಒತ್ತಡ ಹೇರುವ ಯಾವುದೇ ಕೆಲಸ ಮಾಡಬಾರದು ಎಂದೂ ಎಚ್ಚರಿಸಿದ್ದರು.

ಆದರೆ, 17 ವರ್ಷದಿಂದ ಸರ್ಕಾರಿ ನೌಕರರ ಕ್ರೀಡಾಕೂಟದ ಈಜು ವಿಭಾಗದಲ್ಲಿ ಚಾಂಪಿಯನ್ ಸ್ಥಾನವನ್ನು ಬಿಟ್ಟುಕೊಡದ ಮಂಜುನಾಥ್‌, ಹೇಗಾದರೂ ಸರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲೇಬೇಕು ಎಂದು ತೀರ್ಮಾನಿಸಿದರು. ಮನೆಯವರ ಮತ್ತು ಸ್ನೇಹಿತರ ಬೆಂಬಲದಿಂದ ಬಳ್ಳಾರಿಗೆ ಬಂದರು.

‘ಒಂದೇ ಕೈಯಲ್ಲಿ ಈಜಿ ಗೆಲ್ಲಲು ಸಾಧ್ಯವೇ ಎಂಬ ಅಳುಕಿನೊಂದಿಗೇ ಎಂದಿನಂತೆ ನೀರಿಗೆ ಬಿದ್ದೆ. ಒಂದೇ ಕೈಯಲ್ಲಿ ದೇಹವನ್ನು ಮುಂದಕ್ಕೆ ನೂಕಲು ಕಷ್ಟವಾಯಿತು. ಆದರೆ ಧೈರ್ಯಗೆಡಲಿಲ್ಲ. ಒಮ್ಮೆ ನೀರಲ್ಲಿ ಮುಳುಗುತ್ತಾ ಎಡಗೈಯನ್ನು ಮುಂದಕ್ಕೆ ಚಾಚಿ, ಬಲಗೈಯಲ್ಲೇ ನೀರನ್ನು ನೂಕಿ ಮುನ್ನುಗ್ಗಿದೆ’ ಎಂದು ಅವರು ’ಪ್ರಜಾವಾಣಿ’ಗೆ ವಿವರಿಸಿದರು.

ಡಿಸೆಂಬರ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಓಪನ್‌ ವಾಟರ್‌ ಸ್ವಿಮ್ಮಿಂಗ್‌ನಲ್ಲಿ ಅವರೊಂದಿಗೆ ಪಾಲ್ಗೊಂಡಿದ್ದ ಹಾವೇರಿಯ ಶ್ಯಾಮಸುಂದರ ಅಡಿಗ, ಬೆಂಗಳೂರಿನ ಗೋಪಾಲ ಎಸ್‌.ಮಗದುಂ ಹಾಗೂ ಶಿವಮೊಗ್ಗದ ಮೋತಿನಾಯಕ್‌ ಅವರು ಸ್ನೇಹಿತನ ಬೆನ್ನು ತಟ್ಟಿದ್ದು ಎದ್ದುಕಂಡಿತು.

*


–ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಅಂಗವಾಗಿ, ಬಳ್ಳಾರಿಯ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ದೇಹದಾರ್ಢ್ಯ ಸ್ಪರ್ಧೆಯ ವಿಜೇತರು (ಎಡದಿಂದ) ಕಾರವಾರದ ದೀಪಕ್‌ ಗಾಂವಕರ್‌ (60 ಕೆಜಿ), ಉಡುಪಿಯ ಅರುಣ್‌ಕುಮಾರ್‌ (65 ಕೆಜಿ), ಕಾರವಾರದ ಅನಿಲ್‌ಕುಮಾರ್‌ (70 ಕೆಜಿ) ಹಾಗು ರಾಜೇಶ್‌ ಮಡಿವಾಳ (75 ಕೆಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.