ADVERTISEMENT

ಬೆಳೆದು ಬಂದ ದಾರಿ ಮರೆಯದಿರಿ: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮನದಾಳ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ಪತ್ರಕರ್ತ ಪ್ರೇಮ್‌ ಪಣಿಕ್ಕರ್‌ ಅವರು ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಜೊತೆ ಸಂವಾದ ನಡೆಸಿದರು
ಪತ್ರಕರ್ತ ಪ್ರೇಮ್‌ ಪಣಿಕ್ಕರ್‌ ಅವರು ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಜೊತೆ ಸಂವಾದ ನಡೆಸಿದರು   

ಬೆಂಗಳೂರು: ‘ಜೀವನದಲ್ಲಿ ಬಹಳ ಎತ್ತರದ ಸಾಧನೆ ಮಾಡಿದರೂ ಬೆಳೆದು ಬಂದ ದಾರಿಯನ್ನು ಮರೆಯಬಾರದೆಂದು ನನ್ನ ತಂದೆ ಹೇಳಿದ ಮಾತನ್ನು ಸದಾ ಅನುಸರಿಸುತ್ತಿದ್ದೇನೆ. ಆದ್ದರಿಂದಲೇ ರಿಯೊ ಒಲಿಂಪಿಕ್ಸ್‌ ನಂತರದ ಜನಪ್ರಿಯತೆ, ಅಭಿಮಾನಿಗಳ ಪ್ರೀತಿಯನ್ನು ಸಂತಸದಿಂದ ಅನುಭವಿಸಲು ಸಾಧ್ಯವಾಗಿದೆ’–

ಭಾನುವಾರ ‘ದಿ ಹಿಂದು’ ಪತ್ರಿಕೆ ಆಯೋಜಿಸಿದ್ದ ‘ದಿ ಹಡಲ್–2018’ ಕಾರ್ಯಕ್ರಮದಲ್ಲಿ ಅವರು ‘ಕ್ರಾಫ್ಟಿಂಗ್ ಸಕ್ಸೆಸ್: ದಿ ರೈಸ್ ಅ್ಯಂಡ್ ರೈಸ್ ಆಫ್ ಪಿ.ವಿ. ಸಿಂಧು’ (ಯಶಸ್ಸಿನ ಹಾದಿ; ಎತ್ತರದಿಂದ ಎತ್ತರಕ್ಕೆ ಪಿ.ವಿ. ಸಿಂಧು) ವಿಷಯದ ಕುರಿತು ಹಿರಿಯ ಪತ್ರಕರ್ತ ಪ್ರೇಮ್ ಪಣಿಕ್ಕರ್ ಅವರೊಂದಿಗೆ ಮಾತುಕತೆ ನಡೆಸಿದರು. ತಮ್ಮ ಕ್ರೀಡಾ ಸಾಧನೆಗಳು, ಮುಂದಿನ ಗುರಿ ಮತ್ತು ವೈಯಕ್ತಿಕ ಜೀವನದ ಸಂಗತಿಗಳನ್ನು ಹಂಚಿಕೊಂಡರು.

‘ನನಗಾಗಿ ಅಪ್ಪ–ಅಮ್ಮ ಮಾಡಿದ ತ್ಯಾಗಗಳನ್ನು ಮರೆತಿಲ್ಲ. ನಮ್ಮ ಮನೆಯಿಂದ 27 ಕಿಲೋಮೀಟರ್ಸ್‌ ದೂರದಲ್ಲಿ ತರಬೇತಿ ಅಕಾಡೆಮಿಗೆ ಪ್ರತಿದಿನ ಹೋಗಿಬರಬೇಕಿತ್ತು. ಆದ್ದರಿಂದ ಮನೆಯನ್ನು ಬದಲಿಸಬೇಕಾಯಿತು. ನನ್ನ ಯೋಗಕ್ಷೇಮ ನೋಡಿಕೊಳ್ಳಲು ಅಮ್ಮ ಸ್ವಯಂ ನಿವೃತ್ತಿ ಪಡೆದರು. ಕೆಲವು ದಿನಗಳ ಹಿಂದೆ ನನ್ನೊಂದಿಗೆ ಪ್ರಯಾಣ ಮಾಡುವ ಸಲುವಾಗಿ ಅಪ್ಪನೂ ಸ್ವಯಂ ನಿವೃತ್ತಿ ಪಡೆದರು. ಅವರ ನಿರೀಕ್ಷೆಯಂತೆ ಸಾಧನೆ ಮಾಡುತ್ತಿದ್ದೇನೆ’ ಎಂದು ಸಿಂಧು ಹೇಳಿದರು.

ADVERTISEMENT

‘ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ನನ್ನ ಜೀವನ ಬದಲಾಯಿತು. ಜೊತೆಗೆ ಕೌಶಲ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ಕಲಿಕೆಯು ನಿರಂತರವಾಯಿತು. ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ಸಿದ್ಧತೆ ಮಾಡಬೇಕು. ರಿಯೊ ಫೈನಲ್‌ನಲ್ಲಿ ಕ್ಯಾರೊಲಿನಾ ಮರಿನ್ ಅವರ ವೇಗದ ಆಟಕ್ಕೆ ತಕ್ಕಂತೆ ಆಡಬೇಕಿತ್ತು. ಹೋದ ವರ್ಷ ಗ್ಲಾಸ್ಗೋದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ ಷಿಪ್‌ ಫೈನಲ್‌ನಲ್ಲಿ ಒಕುಹರಾ ಅವರು ಸುದೀರ್ಘ ರ‍್ಯಾಲಿ ಆಟಗಾರ್ತಿಯಾಗಿದ್ದರು. ಅದೇ ರೀತಿ ಆಡಿದೆ’ ಎಂದರು

‘ಈ ವರ್ಷ ಕಾಮನ್‌ವೆಲ್ತ್ ಕ್ರೀಡಾಕೂಟ, ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್, ಏಷ್ಯನ್ ಕ್ರೀಡಾಕೂಟ ಮತ್ತು ಸೂಪರ್ ಸೀರಿಸ್ ಸರಣಿಗಳು ಇವೆ. ಅದರಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಗೆಲ್ಲುವ ಗುರಿ ಇದೆ’ ಎಂದು ತಿಳಿಸಿದರು.

‘ಒಮ್ಮೆ ವೇಳಾಪಟ್ಟಿ ಪ್ರಕಟವಾದ ನಂತರ ಏನೂ ಮಾಡಲು ಬರುವುದಿಲ್ಲ. ಅದಕ್ಕೆ ತಕ್ಕಂತೆ ನಾವು ಯೋಜನೆ ರೂಪಿಸಿಕೊಳ್ಳಬೇಕು. 12 ಸೂಪರ್ ಸರಣಿ ಟೂರ್ನಿಗಳು, ಪಿಬಿಎಲ್ ಮತ್ತು ಕಾಮನ್‌
ವೆಲ್ತ್‌, ಏಷ್ಯನ್‌ ಗೇಮ್ಸ್‌ಗಳಲ್ಲಿ ಆಡಲು ಸಿದ್ಧತೆ ನಡೆಸಬೇಕು. ಕೋಚ್‌ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸುವುದು ಸೂಕ್ತ ಮಾರ್ಗ’ ಎಂದರು.

‘ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್ ಅವರು ಅತ್ಯುತ್ತಮವಾದ ಅಕಾಡೆಮಿಗಳನ್ನು ಸ್ಥಾಪಿಸಿದ್ದಾರೆ. ಎರಡು ದೊಡ್ಡ ನಗರಗಳಲ್ಲಿ ಇರುವ ಈ  ಅಕಾಡೆಮಿಗಳಿಂದ ಉತ್ತಮ ಆಟಗಾರರು ಸಿದ್ಧಗೊಳ್ಳುತ್ತಿದ್ದಾರೆ. ಮೂಲಸೌಲಭ್ಯಗಳೂ ಅಭಿವೃದ್ಧಿ ಹೊಂದುತ್ತಿವೆ. ಸರ್ಕಾರದಿಂದಲೂ ಸಾಕಷ್ಟು ಉತ್ತಮ ಯೋಜನೆಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಸಿಂಧು ಹೇಳಿದರು.

‘ಕಿದಂಬಿ ಶ್ರೀಕಾಂತ್, ಪ್ರಣಯ್, ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್, ಸೈನಾ ನೆಹ್ವಾಲ್ ಮತ್ತು ಹಲವು ಯುವ ಆಟಗಾರರು ಈಗ ಇದ್ದಾರೆ. ಬಹಳಷ್ಟು ಯುವ ಆಟಗಾರರು ಬೆಳೆಯುತ್ತಿರುವುದು ಕ್ರೀಡೆಯ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಪಾಲಕರೂ ತಮ್ಮ ಮಕ್ಕಳು ಕ್ರೀಡಾಪಟುಗಳಾಗಲಿ ಎಂದು ಬಯಸುತ್ತಿದ್ದಾರೆ. ತಮ್ಮ ಮಕ್ಕಳನ್ನು ಬರೀ ಎಂಜಿನಿಯರ್, ಡಾಕ್ಟರ್ ಆಗಲಿ ಎಂಬ ಮನೋಭಾವ ಬದಲಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.