ADVERTISEMENT

ಭಾರತಕ್ಕೆ ಪುಟಿದೇಳುವ ಭರವಸೆ

ಮೊದಲ ಹಂತದ ಪಂದ್ಯದಲ್ಲಿ ಸಿ ಗುಂಪಿನ ತಂಡಗಳ ನಡುವೆ ಹಣಾಹಣಿ

ವಿಕ್ರಂ ಕಾಂತಿಕೆರೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ಭಾರತಕ್ಕೆ ಪುಟಿದೇಳುವ ಭರವಸೆ
ಭಾರತಕ್ಕೆ ಪುಟಿದೇಳುವ ಭರವಸೆ   

ಬೆಂಗಳೂರು: ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ ಆನುಭವಿಸಿರುವ ಭಾರತ ತಂಡ ವಿಶ್ವಕ‍ಪ್‌ಗಾಗಿ ಏಷ್ಯಾ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯೊಂದಿಗೆ ಶುಕ್ರವಾರ ಕಣಕ್ಕಿಳಿಯಲಿದೆ.

’ಸಿ’ ಗುಂಪಿನಲ್ಲಿ ಸ್ಥಾನ ಗಳಿಸಿರುವ ಭಾರತಕ್ಕೆ ಮೂರನೇ ಪಂದ್ಯದಲ್ಲಿ ಜೋರ್ಡನ್ ಎದುರಾಳಿ. ಪಂದ್ಯ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಳೆದ ನವೆಂಬರ್‌ನಲ್ಲಿ ಲೆಬನಾನ್‌ ಮತ್ತು ಸಿರಿಯಾ ವಿರುದ್ಧ ನಡೆದ ಪಂದ್ಯಗಳಲ್ಲಿ ಭಾರತ ಸೋತಿತ್ತು. ಲೆಬನಾನ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರಿ ಅಂತರದಿಂದ ಸೋತ ತಂಡ ತವರಿನಲ್ಲಿ ಸಿರಿಯಾ ವಿರುದ್ಧ ಕೇವಲ 17 ಪಾಯಿಂಟ್‌ಗಳಿಂದ ನಿರಾಸೆ ಅನುಭವಿಸಿತ್ತು.

ADVERTISEMENT

ಇದರ ನಂತರ ತಂಡದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲೇ ಬೀಡುಬಿಟ್ಟಿರುವ ಭಾರತದ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರತ್ನಿಸಲಿದ್ದಾರೆ. ಫೆಬ್ರುವರಿ 26ರಂದು ಭಾರತದ ಮತ್ತೊಂದು ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದೆ. ಮೊದಲ ಹಂತದ ಕೊನೆಯ ಎರಡು ಪಂದ್ಯಗಳು ಕ್ರಮವಾಗಿ ಜೂನ್ ಮತ್ತು ಜುಲೈನಲ್ಲಿ ನಡೆಯಲಿವೆ.

ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಆಡಿದ ಅಮೃತ್‌ಪಾಲ್ ಸಿಂಗ್‌ ಮತ್ತು ಅಮ್ಜೋತ್ ಸಿಂಗ್ ವಾಪಸಾಗಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಪಂಜಾಬ್‌ನ ಈ ಆಟಗಾರರು ಸೆಂಟರ್‌ ಮತ್ತು ಫಾರ್ವರ್ಡ್ ವಿಭಾಗಕ್ಕೆ ಬಲ ತುಂಬುವ ಭರವಸೆ ಇದೆ ಎಂಬುದು ತಂಡದ ಸಹಾಯಕ ಕೋಚ್‌ ಜಿ.ಆರ್‌.ಎಲ್ ಪ್ರಸಾದ್ ಅವರ ಭರವಸೆಯ ನುಡಿ.

’ಸಿ’ ಗುಂಪಿನ ಎಲ್ಲ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದ್ದು ಜೋರ್ಡನ್‌ ಅಜೇಯವಾಗಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಸಿರಿಯಾ ಮತ್ತು ಲೆಬನಾನ್‌ ಒಂದೊಂದು ಪಂದ್ಯಗಳಲ್ಲಿ ಗೆದ್ದಿವೆ. ಭಾರತ ಮಾತ್ರ ಇನ್ನೂ ಖಾತೆ ತೆರೆಯಲಿಲ್ಲ. ಎರಡನೇ ಸುತ್ತಿಗೆ ಪ್ರವೇಶ ಪಡೆಯಬೇಕಾದರೆ ಪಾಯಿಂಟ್ ಪಟ್ಟಿಯ ಅಗ್ರ ಮೂರರಲ್ಲಿ ಸ್ಥಾನ ಗಳಿಸಬೇಕು. ಹೀಗಾಗಿ ಮುಂದಿನ ನಾಲ್ಕು ಪಂದ್ಯಗಳು ಭಾರತಕ್ಕೆ ಮಹತ್ವದ್ದು. ಬೆಂಗಳೂರಿನಲ್ಲಿ ಮೂರು ದಿನಗಳ ಅಂತರದಲ್ಲಿ ನಡೆಯಲಿರುವ ಎರಡು ಪಂದ್ಯಗಳಲ್ಲಿ ಗೆದ್ದರೆ ತಂಡದ ಹಾದಿ ಸುಗಮವಾಗಲಿದೆ.

ಬಲಿಷ್ಠ ಜೋರ್ಡನ್‌: ಏಷ್ಯಾದ ಬಲಿಷ್ಠ ತಂಡಗಳಲ್ಲಿ ಜೋರ್ಡನ್‌ ಕೂಡ ಒಂದು. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳ ಸಾಧನೆಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡ ಪ್ರತಿಭಾವಂತ ಆಟಗಾರರ ಬಳಗವನ್ನು ಹೊಂದಿದೆ. ಸಿರಿಯಾ ಮತ್ತು ಲೆಬನಾನ್‌ ತಂಡಗಳನ್ನು ಭಾರಿ ಅಂತರ
ದಿಂದ ಮಣಿಸಿರುವುದು ತಂಡದ ಸಾಮರ್ಥ್ಯಕ್ಕೆ ಸಾಕ್ಷಿ.

ಉತ್ತಮ ಆಟಗಾರರ ಪಟ್ಟಿಯಲ್ಲಿ ಈ ತಂಡದ ದಾರ್ಕವಿಸ್‌ ಲಮಾರ್‌ ಟಕ್ಕರ್‌ ಮೊದಲ ಸ್ಥಾನದಲ್ಲಿದ್ದಾರೆ. ಎರಡು ಪಂದ್ಯಗಳಲ್ಲಿ 47 ಪಾಯಿಂಟ್‌ಗಳನ್ನು ಅವರು ತಮ್ಮ ಖಾತೆಗೆ ಸೇರಿಸಿ ಕೊಂಡಿದ್ದಾರೆ. ಒಟ್ಟು 16 ತಂಡಗಳ ಪೈಕಿ ಸಾಧನೆಯ ಪಟ್ಟಿಯಲ್ಲಿ ಭಾರತ 13ನೇ ಸ್ಥಾನದಲ್ಲಿದೆ. ಭಾರತದ ಸತ್ನಾಂ ಸಿಂಗ್, ಅರವಿಂದ ಆರ್ಮುಗಂ ಮತ್ತು ಅಖಿಲನ್ ಪಾರಿ ಸಾಧಕರ ಪಟ್ಟಿಯಲ್ಲಿದ್ದಾರೆ. ಆದರೆ ಇವರು ಗಳಿಸಿರುವ ಪಾಯಿಂಟ್‌ಗಳು ಕ್ರಮವಾಗಿ 23, 17 ಮತ್ತು 12. ಜೋರ್ಡನ್‌ನ ಮಹಮ್ಮದ್‌ ಎಂ.ಜೆ. ಅಬ್ದೀನ್‌, ಮಹಮ್ಮದ್‌ ಶಾಹೆರ್‌ ಹುಸೇನ್‌, ಅಹಮ್ಮದ್ ಎಫ್‌.ಎಲ್‌ ಅಲ್‌ಹಮರ್ಷೆ ಮತ್ತು ಅಮೀನ್‌ ಇಸ್ಮಾಯಿಲ್‌ ಅಬು ಹವಾಸ್‌ ಕೂಡ ಈ ಪಟ್ಟಿಯಲ್ಲಿದ್ದಾರೆ.

ಉಚಿತ ಪ್ರವೇಶಾವಕಾಶ

ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ. ಕಳೆದ ಪಂದ್ಯದಲ್ಲಿ ಕಂಡು ಬಂದ ಉತ್ತಮ ಪ್ರೋತ್ಸಾಹವೇ ಇದಕ್ಕೆ ಕಾರಣ ಎಂದು ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಕೆ.ಗೋವಿಂದರಾಜ್ ಹೇಳಿದ್ದಾರೆ. ಶಾಲಾ ವಿದ್ಯಾರ್ಥಿಗಳು ಪಂದ್ಯ ವೀಕ್ಷಿಸಲು ಅನುಕೂಲ ಆಗಲಿ ಎಂಬ ಉದ್ದೇಶವೂ ಇದರ ಹಿಂದೆ ಇದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.