ADVERTISEMENT

78ರ ಯುವಕನ ಮ್ಯಾರಥಾನ್ ಸಾಧನೆ: ಆಶೀಶ್ 109 ನಾಟೌಟ್!

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ವಾಷಿಂಗ್ಟನ್ (ಐಎಎನ್‌ಎಸ್): ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಓಡಿದ  78ರ ಹರೆಯದ ಆಶೀಶ್ ರಾಯ್ ತಮ್ಮ ಜೀವನದ 109ನೇ ಮ್ಯಾರಥಾನ್ ಓಟದ ಸ್ಪರ್ಧೆಯ ಗುರಿ ಮುಟ್ಟಿದರು.

ಭಾನುವಾರ ವಿಂಡ್‌ಸ್ವೆಪ್ಟ್ ಚಿಲ್ಲಿಯ ಪೊಟೋಮ್ಯಾಕ್ ರಿವರ್ ರನ್ ಮ್ಯಾರಥಾನ್ ಸ್ಪರ್ಧೆಯಲ್ಲಿ 6ತಾಸು, 37ನಿಮಿಷ, 42 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಪದಕ ಗೆಲ್ಲದಿದ್ದರೂ ನೂರಾರು ಜನರ ಮನ ಗೆದ್ದರು.

75 ರಿಂದ 79 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧಿಸಿದ ಅವರು ಹದಿಹರೆಯದವರನ್ನೂ ನಾಚಿಸುವಂತೆ ಓಡಿದರು. ಮರಳು ಮತ್ತು ಗಟ್ಟಿ ನೆಲದ ಮೇಲೆ ಓಡಿದ ಪರಿಣಾಮವಾಗಿ ಕಾಲುಗಳಲ್ಲಿ ತೀವ್ರ ನೋವಿದ್ದರೂ ಅವರು 26.2 ಮೈಲುಗಳ ಅಂತರವನ್ನು ಕ್ರಮಿಸುವಲ್ಲಿ ಸಫಲರಾದರು. ಕಳೆದ ವರ್ಷವೂ ಅವರು ಇದೇ ಸ್ಪರ್ಧೆಯಲ್ಲಿ 6 ತಾಸು, 37ನಿಮಿಷ, 42ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ADVERTISEMENT

ಈ ವರ್ಷ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎರಡು ಮ್ಯಾರಥಾನ್ ಸ್ಪರ್ಧೆಗಳಲ್ಲಿ ಓಡಿದ ಸಾಧನೆ ಮಾಡಿದ್ದಾರೆ. ಈ ಬಾರಿ ಗುರಿ ಮುಟ್ಟಲು ಕೆಲವೇ ಮೀಟರುಗಳ ಅಂತರವಿದ್ದಾಗ ಅವರು ತಮ್ಮ  ಇಬ್ಬರು ಮೊಮ್ಮಕ್ಕಳೊಂದಿಗೆ ತ್ರಿವರ್ಣ ಧ್ವಜವನ್ನು ಹಿಡಿದು ಓಡಿದರು.

‘ನನ್ನ ಓಟದಲ್ಲಿ ಕೆಲವು ಮೀಟರುಗಳ ಅಂತರವನ್ನು ನನ್ನ ಮೊಮ್ಮಕ್ಕಳೂ ಓಡಿದ್ದು ನನಗೆ ಅತೀವ ಸಂತಸ ತಂದಿದೆ’ ಎಂದು ರಾಯ್ ಪ್ರತಿಕ್ರಿಯಿಸಿದರು. 

ಭಾರತೀಯ ಏರ್‌ಫೋರ್ಸ್‌ನಲ್ಲಿ ಹೃದಯತಜ್ಞರಾಗಿದ್ದ ರಾಯ್ ತಮ್ಮ 52ನೇ ವಯಸ್ಸಿನಲ್ಲಿ ನಿವೃತ್ತರಾಗಿದ್ದರು. ಆಗಿನಿಂದಲೂ ಓಟದ ಹವ್ಯಾಸ ಆರಂಭಿಸಿದ್ದರು. ರಾಯ್ ತಮ್ಮ 100ನೇ ಮ್ಯಾರಥಾನ್ ಓಟವನ್ನು ಕಳೆದ ಜನವರಿ 17ರಂದು ಮುಂಬೈ ಮಹಾನಗರಿಯಲ್ಲಿ ಓಡಿದ್ದರು. ಅವರು ಇದುವರೆಗೆ ಭಾರತದಲ್ಲಿ 38 ಮ್ಯಾರಥಾನ್ ಮತ್ತು ಇಪ್ಪತ್ತು ಬೇರೆ ಬೇರೆ ರಾಷ್ಟ್ರಗಳಲ್ಲಿ ಒಟ್ಟು 71 ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ಅವರು ಬರೆದ ‘ಜಾಯ್ ಆಫ್  ರನ್ನಿಂಗ್’ ಪುಸ್ತಕವು ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.