ADVERTISEMENT

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿ: ಬೆಂಗಳೂರು ಎಫ್‌ಸಿಗೆ ಮಣಿದ ಮುಂಬೈ

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿ: ಎರಡು ಗೋಲು ಗಳಿಸಿದ ಪ್ರಿನ್ಸ್‌ ಇಬಾರ

ಪಿಟಿಐ
Published 10 ಜನವರಿ 2022, 16:27 IST
Last Updated 10 ಜನವರಿ 2022, 16:27 IST
ಗೋಲು ಗಳಿಸಿ ಸಂಭ್ರಮಿಸಿದ ಬಿಎಫ್‌ಸಿಯ ಡ್ಯಾನಿಷ್ ಫಾರೂಕ್‌
ಗೋಲು ಗಳಿಸಿ ಸಂಭ್ರಮಿಸಿದ ಬಿಎಫ್‌ಸಿಯ ಡ್ಯಾನಿಷ್ ಫಾರೂಕ್‌   

ಫತೋರ್ಡ, ಗೋವಾ: ಬಲಿಷ್ಠ ಮುಂಬೈ ವಿರುದ್ಧ ಅಮೋಘ ಆಟವಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಭರ್ಜರಿ ಜಯ ಗಳಿಸಿತು.

ಜವಾಹರ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಪ್ರಿನ್ಸ್ ಇಬಾರ ಗಳಿಸಿದ ಎರಡು ಗೋಲುಗಳ ಬಲದಿಂದ ತಂಡ 3–0ಯಿಂದ ಗೆದ್ದು ಲಯಕ್ಕೆ ಮರಳಿತು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮುಂಬೈಯ ಕನಸು ಭಗ್ನಗೊಂಡಿತು.

ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ಹಿಡಿತ ಸಾಧಿಸುವಲ್ಲಿ ಮುಂಬೈ ಮೇಲುಗೈ ಸಾಧಿಸಿದರೂ ಸಿಕ್ಕಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಬಿಎಫ್‌ಸಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿತು.

ADVERTISEMENT

8ನೇ ನಿಮಿಷದಲ್ಲಿ ಡ್ಯಾನಿಷ್ ಫಾರೂಕ್ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಬಲಭಾಗದಲ್ಲಿ ಲಭಿಸಿದ ‍‍ಪಾಸ್‌ನಲ್ಲಿ ಕ್ಲೀಟನ್ ಸಿಲ್ವಾ ಚತುರ ನಡೆಯನ್ನು ತೋರಿದರು. ಮುಂಬೈ ಡಿಫೆಂಡರ್‌ಗಳನ್ನು ತಪ್ಪಿಸಿ ಚೆಂಡನ್ನು ಡ್ಯಾನಿಷ್ ಅವರಿಗೆ ನೀಡಿದರು. ಡ್ಯಾನಿಷ್‌ ಮೋಹಕವಾಗಿ ಗುರಿ ಮುಟ್ಟಿಸಿದರು. ನಂತರ ಪ್ರಿನ್ಸ್ ಇಬಾರ ಆಟದ ಸೊಬಗು ಮೇಳೈಸಿತು. 23ನೇ ನಿಮಿಷದಲ್ಲಿ ರೋಷನ್ ನೌರೆಮ್ ನೀಡಿದ ಸುಂದರ ಪಾಸ್‌ನಲ್ಲಿ ಗೋಲು ಗಳಿಸಿದ ಅವರು ಮೊದಲಾರ್ಧದ ಮುಕ್ತಾಯದ ಕೊನೆಯ ನಿಮಿಷದಲ್ಲಿ ಮತ್ತೊಮ್ಮೆ ಯಶಸ್ಸು ಕಂಡರು.

ಈ ಮುನ್ನಡೆಯನ್ನು ಉಳಿಸಿಕೊಂಡೇ ದ್ವಿತೀಯಾರ್ಧದ ಪೂರ್ತಿ ಆಡಿದ ಬಿಎಫ್‌ಸಿ ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲೂ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.