ADVERTISEMENT

ಕಪಿಲ್ ದೇವ್ ಮೌಲ್ಯ ₹ 150 ಕೋಟಿ!

1983ರ ಏಕದಿನ ವಿಶ್ವಕಪ್ ಟೂರ್ನಿಯ ವಿಜೇತ ತಂಡದ ಆಟಗಾರ ಶ್ರೀಕಾಂತ್ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:18 IST
Last Updated 2 ಏಪ್ರಿಲ್ 2019, 19:18 IST
1983ರಲ್ಲಿ ಏಕದಿನಕ್ರಿಕೆಟ್ ವಿಶ್ವಕಪ್ ಗೆದ್ದಿದ್ದ ಭಾರತ ತಂಡದ  ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಸೈಯದ್ ಕಿರ್ಮಾನಿ ಅವರು ಮಂಗಳವಾರ ಬೆಂಗಳೂರಿನಲ್ಲಿ ಬ್ರಿಟಾನಿಯಾ  ಏರ್ಪಡಿಸಿದ್ದ ಫನ್‌ ಕ್ರಿಕೆಟ್‌ನಲ್ಲಿ ಆಡಿದ ರಸಘಳಿಗೆ  –ಪ್ರಜಾವಾಣಿ ಚಿತ್ರ
1983ರಲ್ಲಿ ಏಕದಿನಕ್ರಿಕೆಟ್ ವಿಶ್ವಕಪ್ ಗೆದ್ದಿದ್ದ ಭಾರತ ತಂಡದ  ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಸೈಯದ್ ಕಿರ್ಮಾನಿ ಅವರು ಮಂಗಳವಾರ ಬೆಂಗಳೂರಿನಲ್ಲಿ ಬ್ರಿಟಾನಿಯಾ  ಏರ್ಪಡಿಸಿದ್ದ ಫನ್‌ ಕ್ರಿಕೆಟ್‌ನಲ್ಲಿ ಆಡಿದ ರಸಘಳಿಗೆ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಂಗಳವಾರ ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಕಪಿಲ್‌ ದೇವ್ ಅವರು ₹ 150 ಕೋಟಿ ಮೌಲ್ಯ ಪಡೆದರು!

ಹಿರಿಯ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ನಡೆಸಿದ ಅಣಕು ಹರಾಜು ಪ್ರಕ್ರಿಯೆಯಲ್ಲಿ ಕಪಿಲ್‌ ದೇವ್ ಅವರನ್ನು ಕೊಂಡಿದ್ದೂ ಅವರೇ. ಕಪಿಲ್ ಅವರ ಮೂಲಬೆಲೆಯನ್ನು ₹ 50 ಕೋಟಿಗೆ ನಿಗದಿಪಡಿಸಿದ್ದೂ ಅವರೇ!

ಬ್ರಿಟಾನಿಯಾ ಬಿಸ್ಕಿಟ್ಸ್‌ ಆಯೋಜಿಸಿದ್ದ ‘ಬ್ರಿಟಾನಿಯಾ ಖಾವೋ, ವರ್ಲ್ಡ್‌ ಕಪ್ ಜಾವೋ’ ಅಭಿಯಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ 1983ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಕಪಿಲ್ ದೇವ್ ಅವರ ಮಹತ್ವವನ್ನು ಶ್ರೀಕಾಂತ್ ಈ ರೀತಿ ಹಾಸ್ಯವಾಗಿ ನಿರೂಪಿಸಿದ್ದರು. ಈ ಸಂದರ್ಭದಲ್ಲಿ ಕಪಿಲ್, ರೋಜರ್ ಬಿನ್ನಿ ಮತ್ತು ಸೈಯದ್ ಕಿರ್ಮಾನಿ ಕೂಡ ಇದ್ದರು. ಭಾರತದ ಕ್ರಿಕೆಟ್‌ ಚರಿತ್ರೆಯ ಮಹತ್ವದ ಜಯವೆಂದೇ ಬಣ್ಣಿಸಲಾಗುವ 83ರ ವಿಜಯದ ಕುರಿತು ಈ ದಿಗ್ಗಜರು ನೆನಪಿನ ಬುತ್ತಿ ಬಿಚ್ಚಿಟ್ಟರು.

ADVERTISEMENT

ಸ್ಫೋಟಕ ಬ್ಯಾಟ್ಸ್‌ಮನ್ ಆಗಿದ್ದ ಶ್ರೀಕಾಂತ್ ಮಾತಿನಲ್ಲಿಯೂ ಅದೇ ತರಹ. ವಾಚಾಳಿತನ ಮತ್ತು ಹಾಸ್ಯಭರಿತ ಹಾವಭಾವಗಳೊಂದಿಗೆ ಇಡೀ ವೇದಿಕೆಯನ್ನು ಆವರಿಸಿದರು.

‘ಪ್ರಾಮಾಣಿಕವಾಗಿ ಹೇಳುತ್ತೇನೆ. 1983ರಲ್ಲಿ ಇಂಗ್ಲೆಂಡ್‌ಗೆ ವಿಶ್ವಕಪ್ ಟೂರ್ನಿ ಆಡಲು ತೆರಳಿದ್ದ ನಾವು ಗಂಭೀರವಾಗಿರಲಿಲ್ಲ. ಲೀಗ್ ಹಂತದಲ್ಲಿಯೇ ಸೋಲುತ್ತೇವೆ ಎಂಬ ವಿಶ್ವಾಸ ಇತ್ತು. ಆದರೆ. ನಮಗೆ ಗೆಲ್ಲುವ ಸಾಮರ್ಥ್ಯ ಇದೆ. ಚೆನ್ನಾಗಿ ಆಡೋಣ ಎಂದವರು ಕಪಿಲ್‌ ದೇವ್ ನಿಕಾಂಜ್ ಮಾತ್ರ. ಟೂರ್ನಿಯ ಕೆಲವು ದಿನಗಳ ಮುನ್ನ ನನ್ನ ಮದುವೆಯಾಗಿತ್ತು. ಅಮೆರಿಕಕ್ಕೆ ಮಧುಚಂದ್ರಕ್ಕೆ ಹೋಗಲು ಯೋಜಿಸಿದ್ದೆ. ಆಗ ಟೂರ್ನಿಗೆ ಹೊರಟಿದ್ದ ಭಾರತ ತಂಡಕ್ಕೆ ಆಯ್ಕೆಯಾದೆ. ಅಮೆರಿಕ ಹೋಗುವ ಮಾರ್ಗದಲ್ಲಿ ಲಂಡನ್‌ನಲ್ಲಿ ಇಳಿಯೋಣ. ಹೇಗೂ ಲೀಗ್‌ ಹಂತದಲ್ಲಿ ಸೋಲ್ತೇವೆ. ಲಾರ್ಡ್ಸ್‌ನಲ್ಲಿ ನಮಗೆ ಸಿಗುವ ಉಚಿತ ಟಿಕೆಟ್‌ಗಳನ್ನು ಪಡೆದು ಸೆಮಿಫೈನಲ್ ಮತ್ತು ಫೈನಲ್ ನೋಡೋಣ. ಅಮೆರಿಕಕ್ಕೆ ತೆರಳೋಣ ಎಂದು ಪತ್ನಿಗೆ ಹೇಳಿದ್ದೆ. ಏಕೆಂದರೆ, 1975ರಲ್ಲಿ ಹೀನಾಯವಾಗಿ ಸೋತಿದ್ದೇವು. 1979ರಲ್ಲಿ ಗುಜರಾತಿಗಳು ಇದ್ದ ಈಸ್ಟ್‌ ಆಫ್ರಿಕಾ ವಿರುದ್ಧ ಒಂದು ಪಂದ್ಯ ಗೆದ್ದಿಧ್ದೆವು. ಅದಕ್ಕಾಗಿ ಇಂಗ್ಲೆಂಡ್‌ನಲ್ಲಿಯೂ ಸೋಲು ಖಚಿತ ಎಂದುಕೊಂಡಿದ್ದೆವು. ಆದರೆ, ಕಪಿಲ್ ಆತ್ಮವಿಶ್ವಾಸ ಕ್ರಿಕೆಟ್‌ನ ಇತಿಹಾಸವನ್ನೇ ಬದಲಿಸಿತು. ಅದಕ್ಕೆ ಅವರು ವಿಶ್ವದ ಸಾರ್ವಕಾಲೀಕ ಅತಿ ಹೆಚ್ಚು ಮೌಲ್ಯದ ಆಟಗಾರ’ ಎಂದು ಶ್ರೀಕಾಂತ್ ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕಪಿಲ್, ‘ವಿಶ್ವಕಪ್‌ ಟೂರ್ನಿಗಿಂತ ಕೆಲವು ತಿಂಗಳುಗಳ ಮೊದಲು ಭಾರತವು ವೆಸ್ಟ್ ಇಂಡೀಸ್ ತಂಡವನ್ನು ಅವರ ತವರಿನಲ್ಲಿಯೇ ನಡೆದಿದ್ದ ಟೆಸ್ಟ್‌ನಲ್ಲಿ ಸೋಲಿಸಿತ್ತು. ಆ ತಂಡದಲ್ಲಿ ಆಡಿದ್ದ ಅನುಭವಿ ಆಟಗಾರರು ವಿಶ್ವಕಪ್‌ ತಂಡದಲ್ಲಿಯೂ ಇದ್ದರು. ಅದರಿಂದಾಗಿ ನನಗೆ ವಿಂಡೀಸ್ ತಂಡವನ್ನು ಸೋಲಿಸಬಹುದು ಎಂಬ ಭರವಸೆಯಿತ್ತು’ ಎಂದರು.

ಅವರಿಗೆ ದನಿಗೂಡಿಸಿದ ಸೈಯದ್ ಕಿರ್ಮಾನಿ, ‘ಪಂದ್ಯಕ್ಕೆ ಮುನ್ನಾದಿನ ನಡೆದಿದ್ದ ಸಭೆಯಲ್ಲಿ ನಮ್ಮ ತಂಡದಲ್ಲಿ ಮೂರ್ನಾಲ್ಕು ಜನ ಸೀನಿಯರ್‌ಗಳಿದ್ದೀರಿ. ನೀವು ಮುಕ್ತವಾಗಿ ಆಡಿ. ತಂಡ ಗೆಲ್ಲುತ್ತದೆ. ವಿಂಡೀಸ್‌ ಎದುರು ಹೇಗೆ ಆಡಬೇಕು ಎಂದು ನೀವೇ ತೀರ್ಮಾನಿಸಿಕೊಳ್ಳಿ ಎಂದಿದ್ದರು. ನಮ್ಮ ಜವಾಬ್ದಾರಿ ಅರಿತು ಆಡಲು ಅವರು ಕೊಟ್ಟ ಸ್ವಾತಂತ್ರ್ಯವೇ ಕಾರಣವಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.