ADVERTISEMENT

ಚೆಂಡು ವಿರೂಪಕ್ಕೆ ಸ್ಟ್ರಾಪ್‌ ಬಳಕೆ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಾರ್ನರ್ ‘ಆಟ’ ಬಿಚ್ಚಿಟ್ಟ ಕುಕ್

ಪಿಟಿಐ
Published 11 ಸೆಪ್ಟೆಂಬರ್ 2019, 20:27 IST
Last Updated 11 ಸೆಪ್ಟೆಂಬರ್ 2019, 20:27 IST
ಅಲಸ್ಟೇರ್ ಕುಕ್
ಅಲಸ್ಟೇರ್ ಕುಕ್   

ಲಂಡನ್: ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್‌ ಅವರಿಗೆ ಚೆಂಡು ವಿರೂಪಗೊಳುವ ಚಾಳಿ ಪ್ರಥಮ ದರ್ಜೆ ಕ್ರಿಕೆಟ್‌ ಆಡುವ ದಿನಗಳಿಂದಲೇ ಇತ್ತೇ?

‘ಹೌದು’ ಎನ್ನುತ್ತದೆ ಇಂಗ್ಲೆಂಡ್ ಕ್ರಿಕೆಟ್‌ ಆಟಗಾರ ಅಲಸ್ಟೇರ್ ಕುಕ್ ಬರೆದಿರುವ ‘ದ ಆಟೊಬಯೋಗ್ರಫಿ’ ಕೃತಿ. ಹೋದ ವರ್ಷ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಕುಕ್ ಈಚೆಗೆ ತಮ್ಮ ಆತ್ಮಚರಿತ್ರೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

‘ತಾವು ಪ್ರಥಮ ದರ್ಜೆ ಕ್ರಿಕೆಟ್ ಆಡುವಾಗ ಚೆಂಡನ್ನು ಬೇಗ ಹಾಳು ಮಾಡಲೆಂದೇ ಕೈಗೊಂದು ಸ್ಟ್ರಾಪ್‌ (ಪಟ್ಟಿ) ಕಟ್ಟಿಕೊಡಿರುತ್ತಿದ್ದುದಾಗಿ ಸ್ವತಃ ವಾರ್ನರ್ ನನಗೆ ಹೇಳಿದ್ದರು. 2017–18ರಲ್ಲಿ ಆಸ್ಟ್ರೇಲಿಯಾ ತಂಡವು ಆ್ಯಷಸ್ ಸರಣಿ ಗೆದ್ದ ನಂತರ ಸಂತೋಷಕೂಟ ಏರ್ಪಡಿಸಿತ್ತು. ಬಿಯರ್ ಪಾರ್ಟಿಯಲ್ಲಿ ತುಸು ಹೆಚ್ಚು ಬಿಯರ್ ಕುಡಿದಿದ್ದ ವಾರ್ನರ್‌ ಈ ಗುಟ್ಟನ್ನು ನನ್ನ ಮುಂದೆ ಹೇಳಿದ್ದರು. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಸ್ಟೀವ್ ಸ್ಮಿತ್ ಇದರಿಂದಾಗಿ ಗಾಬರಿಯಾಗಿದ್ದರು. ಈ ವಿಷಯ ಹೇಳಬಾರದಿತ್ತೆಂದು ವಾರ್ನರ್‌ಗೆ ಗದರಿದ್ದರು’ ಎಂದು ಕುಕ್ ಉಲ್ಲೇಖಿಸಿದ್ದಾರೆ. ಈ ವಿಷಯವನ್ನು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ADVERTISEMENT

ಕುಕ್ ಅವರು ಕೃತಿಯಲ್ಲಿ ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್‌ಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಅದರಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಅವರ ಹೆಸರಿಲ್ಲ.

‘ಬ್ರಯನ್ ಲಾರಾ, ರಿಕಿ ಪಾಂಟಿಂಗ್ ಮತ್ತು ಜಾಕ್ ಕಾಲಿಸ್ ನಾನು ಕಂಡ ಅಪ್ರತಿಮ ಬ್ಯಾಟ್ಸ್‌ಮನ್‌ಗಳು. ಈಗ ಸ್ಟೀವ್ ಸ್ಮಿತ್ ನನಗಿಂತ ಚಿಕ್ಕವರು. ಆದರೆ, ಅವರ ಸಾಧನೆ ಅದ್ವಿತೀಯ. ಅದ್ಭುತವಾಗಿ ಆಡುತ್ತಿದ್ಧಾರೆ’ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.