ADVERTISEMENT

ರಾಜಸ್ಥಾನ್ ರಾಯಲ್ಸ್ ಗೆ ಜಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:15 IST
Last Updated 27 ಏಪ್ರಿಲ್ 2019, 20:15 IST
   

ಜೈಪುರ(ಪಿಟಿಐ):ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್‌ಗಳು ಶ್ರಮವು ವ್ಯರ್ಥವಾಗದಂತೆ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಸಂಜು ಸ್ಯಾಮ್ಸನ್ ನೋಡಿಕೊಂಡರು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ಸ್‌ ತಂಡವು 7 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಸನ್‌ರೈಸರ್ಸ್‌ ತಂಡವು ಮನೀಷ್ ಪಾಂಡೆ ಅರ್ಧಶತಕದ (61; 36ಎಸೆತ, 9ಬೌಂಡರಿ) ಬಲದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 160 ರನ್‌ ಗಳಿಸಿತು. ವರುಣ್ ಆ್ಯರನ್, ಥಾಮಸ್, ಶ್ರೇಯಸ್ ಮತ್ತು ಉನದ್ಕತ್ ತಲಾ ಎರಡು ವಿಕೆಟ್ ಗಳಿಸಿದರು.

ಗುರಿ ಬೆನ್ನತ್ತಿದ ರಾಯಲ್ಸ್‌ ತಂಡವು ಲಿಯಾಮ್ (44; 26ಎಸೆತ, 4ಬೌಂಡರಿ, 3ಸಿಕ್ಸರ್) ಮತ್ತು ಸಂಜು ಸ್ಯಾಮ್ಸನ್ (ಔಟಾಗದೆ 48; 32ಎಸೆತ, 4ಬೌಂಡರಿ, 1ಸಿಕ್ಸರ್) ಅವರ ಆಟದಿಂದ 19.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 161 ರನ್‌ ಗಳಿಸಿತು.

ADVERTISEMENT

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್‌ ತಂಡ ನಾಯಕ ಕೇನ್ ವಿಲಿಯಮ್ಸನ್ (13 ರನ್) ರಾಯಲ್ಸ್‌ ತಂಡದ ಸ್ಪಿನ್ನರ್, ಕನ್ನಡಿಗ ಶ್ರೇಯಸ್ ಗೋಪಾಲ್ ಸ್ಪಿನ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಜಾನಿ ಬೇಸ್ಟೊ ಇಂಗ್ಲೆಂಡ್‌ಗೆ ಮರಳಿರುವುದರಿಂದ ಕೇನ್ ಇನಿಂಗ್ಸ್ ಆರಂಭಿಸಿದ್ದರು.

ಡೇವಿಡ್ ವಾರ್ನರ್ ಅವರೊಂದಿಗೆ ಸೇರಿಕೊಂಡ ಮನೀಷ್ ತಂಡದ ರನ್‌ ಗಳಿಕೆಗೆ ಚೇತರಿಕೆ ನೀಡಿದರು. ಆದರೆ ಇಬ್ಬರೂ ತಮ್ಮ ಸ್ಫೋಟಕ ಶೈಲಿಯ ಆಟವನ್ನು ನಿಯಂತ್ರಿಸಿಕೊಂಡು ತಾಳ್ಮೆಯಿಂದ ಆಡಿದ್ದು ವಿಶೇಷ. ಇದರಿಂದಾಗಿ ಎರಡನೇ ವಿಕೆಟ್ ಜೊತೆಯಾಟದಲ್ಲಿ ತಂಡವು 75 ರನ್‌ಗಳು ಸೇರಿದವು.

13ನೇ ಓವರ್‌ನಲ್ಲಿ ಒಷೇನ್ ಥಾಮಸ್ ಅವರ ಎಸೆತದಲ್ಲಿ ಡೇವಿಡ್ ಔಟಾದರು. 15ನೇ ಓವರ್‌ ಬೌಲಿಂಗ್ ಮಾಡಿದ ಶ್ರೇಯಸ್ ತಮ್ಮ ‘ಗೆಳೆಯ’ ಪಾಂಡೆಯವರ ವಿಕೆಟ್ ಕಬಳಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.