ADVERTISEMENT

ಕುತೂಹಲ ಘಟ್ಟದಲ್ಲಿ ರಾವಲ್ಪಿಂಡಿ ಟೆಸ್ಟ್‌

ಪಾಕಿಸ್ತಾನ ಗೆಲುವಿಗೆ 343 ರನ್‌ಗಳ ಗುರಿ ನೀಡಿದ ಇಂಗ್ಲೆಂಡ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 18:36 IST
Last Updated 4 ಡಿಸೆಂಬರ್ 2022, 18:36 IST
ಇಂಗ್ಲೆಂಡ್ ತಂಡದ ಬೌಲರ್ ವಿಲ್ ಜ್ಯಾಕ್ಸ್‌ ಸಂಭ್ರಮ  –ಎಎಫ್‌ಪಿ ಚಿತ್ರ
ಇಂಗ್ಲೆಂಡ್ ತಂಡದ ಬೌಲರ್ ವಿಲ್ ಜ್ಯಾಕ್ಸ್‌ ಸಂಭ್ರಮ  –ಎಎಫ್‌ಪಿ ಚಿತ್ರ   

ರಾವಲ್ಪಿಂಡಿ (ಪಿಟಿಐ): ರನ್‌ಗಳ ಹೊಳೆಯಲ್ಲಿ ತೇಲುತ್ತಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಟೆಸ್ಟ್ ಪಂದ್ಯ ರೋಚಕ ಫಲಿತಾಂಶದ ನಿರೀಕ್ಷೆ ಮೂಡಿಸಿದೆ.

ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದ ಆಟದಲ್ಲಿ 343 ರನ್‌ಗಳ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಎರಡನೇ ಇನಿಂಗ್ಸ್‌ ಡಿಕ್ಲೇರ್ ಮಾಡಿದ ಇಂಗ್ಲೆಂಡ್ ಅಚ್ಚರಿ ಮೂಡಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ದಿನದ ಮುಕ್ತಾಯಕ್ಕೆ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 80 ರನ್‌ ಗಳಿಸಿದೆ. ಕೊನೆಯ ದಿನವಾದ ಸೋಮವಾರ 263 ರನ್‌ಗಳನ್ನು ಗಳಿಸುವ ಸವಾಲು ತಂಡಕ್ಕೆ ಇದೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಇಮಾಮ್ ಉಲ್ ಹಕ್ (ಬ್ಯಾಟಿಂಗ್ 43) ಹಾಗೂ ಸೌದ್ ಶಕೀಲ್ (ಬ್ಯಾಟಿಂಗ್ 24) ಕ್ರೀಸ್‌ನಲ್ಲಿದ್ದಾರೆ.

ಬ್ಯಾಟರ್‌ಗಳ ಸ್ವರ್ಗವಾಗಿರುವ ಪಿಚ್‌ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 78 ರನ್‌ಗಳ ಮುನ್ನಡೆ ಗಳಿಸಿತ್ತು. ತಂಡದ ನಾಲ್ವರು ಶತಕ ದಾಖಲಿಸಿದ್ದರು. ಪಾಕ್ ತಂಡದ ಮೂವರು ಬ್ಯಾಟರ್‌ಗಳೂ ಸತಕ ದಾಖಲಿಸಿದ್ದರು.

ADVERTISEMENT

ಭಾನುವಾರ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 35.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 264 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಪಾಕ್ ತಂಡದ ಆರಂಭಿಕ ಬ್ಯಾಟರ್ ಅಬ್ದುಲ್ ಶಫೀಕ್ ಅವರ ವಿಕೆಟ್ ಅನ್ನು ರಾಬಿನ್ಸನ್ ಹಾಗೂ ಬಾಬರ್ ಆಜಂ ವಿಕೆಟ್‌ ಅನ್ನು ಬೆನ್ ಸ್ಟೋಕ್ಸ್‌ ಗಳಿಸಿದರು. ಅಜರ್ ಅಲಿ ಗಾಯಗೊಂಡು ನಿವೃತ್ತಿಯಾದರು.

ಶನಿವಾರ ಪಾಕ್ ತಂಡವು 7 ವಿಕೆಟ್‌ಗಳಿಗೆ 499 ರನ್ ಗಳಿಸಿತ್ತು. ಬೆಳಿಗ್ಗೆ ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್‌. ಪಾಕ್ ತಂಡದ ಉಳಿದ ಮೂರು ವಿಕೆಟ್‌ಗಳನ್ನೂ ಕಬಳಿಸಿದರು. ಆತಿಥೇಯ ತಂಡವು 579 ರನ್‌ಗಳಿಗೆ ಆಲೌಟ್ ಆಯಿತು. ಈ ಇನಿಂಗ್ಸ್‌ನಲ್ಲಿ ವಿಲ್ ಒಟ್ಟು ಆರು ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್ 657, ಪಾಕಿಸ್ತಾನ: 579. ಎರಡನೇ ಇನಿಂಗ್ಸ್: ಇಂಗ್ಲೆಂಡ್: 35.5 ಓವರ್‌ಗಳಲ್ಲಿ 7ಕ್ಕೆ264 ಡಿಕ್ಲೇರ್ಡ್ (ಜ್ಯಾಕ್ ಕ್ರಾಲಿ 50, ಜೋ ರೂಟ್ 73, ಹ್ಯಾರಿ ಬ್ರೂಕ್ 87, ವಿಲ್ ಜ್ಯಾಕ್ಸ್ 24, ನಸೀಂ ಶಾ 66ಕ್ಕೆ2, ಮೊಹಮ್ಮದ್ ಅಲಿ 64ಕ್ಕೆ2, ಜಹೀದ್ ಮೆಹಮೂದ್ 84ಕ್ಕೆ2) ಪಾಕಿಸ್ತಾನ: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 80 (ಇಮಾಮ್ ಉಲ್ ಹಕ್ ಬ್ಯಾಟಿಂಗ್ 43, ಸೌದ್ ಶಕೀಲ್ ಬ್ಯಾಟಿಂಗ್ 24, ಒಲೀ ರಾಬಿನ್ಸನ್ 22ಕ್ಕೆ1, ಬೆನ್ ಸ್ಟೋಕ್ಸ್ 20ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.