ADVERTISEMENT

ಎಜ್ಬಾಸ್ಟನ್‌ ಟೆಸ್ಟ್: ಬೂಮ್ರಾ ಆಡುವರೇ?

ಚಿಂತಕರ ಚಾವಡಿಗೆ ವೇಗಿಯ ಕಾರ್ಯದೊತ್ತಡ ನಿಭಾಯಿಸುವ ಸವಾಲು

ಪಿಟಿಐ
Published 27 ಜೂನ್ 2025, 15:44 IST
Last Updated 27 ಜೂನ್ 2025, 15:44 IST
<div class="paragraphs"><p>ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ 200 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.</p></div>

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ 200 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

   

(ಚಿತ್ರ ಕೃಪೆ: X/@cricketcomau)

ನವದೆಹಲಿ: ಜಸ್‌ಪ್ರೀತ್ ಬೂಮ್ರಾ ಅವರು ಎಜ್ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಆಡುತ್ತಾರೆಯೇ? ಮೊದಲ ಟೆಸ್ಟ್‌ ಪಂದ್ಯ ಸೋತ ನಂತರ ಸಮಬಲ ಸಾಧಿಸುವ ಪ್ರಯತ್ನದಲ್ಲಿರುವ ಭಾರತ ತಂಡದ ಚಿಂತಕರ ಚಾವಡಿಗೆ ಎದುರಾಗಿರುವ ದೊಡ್ಡ ಪ್ರಶ್ನೆ ಇದು.

ADVERTISEMENT

ಭಾರತ ತಂಡ ಒಂದು ಹಂತದಲ್ಲಿ ಸ್ಪಷ್ಟ ಮೇಲುಗೈ ಹೊಂದಿದ್ದರೂ, ಕೆಳಕ್ರಮಾಂಕದ ಆಟಗಾರರ ವೈಫಲ್ಯ, ಕಳಪೆ ಫೀಲ್ಡಿಂಗ್ ಮತ್ತು ಶಿಸ್ತಿಲ್ಲದ ಬೌಲಿಂಗ್‌ನಿಂದ ಹೆಡಿಂಗ್ಲೇ ಟೆಸ್ಟ್‌ ಪಂದ್ಯವನ್ನು ಐದು ವಿಕೆಟ್‌ ಸೋತಿತ್ತು. 

ಐದು ಟೆಸ್ಟ್‌ಗಳ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಜುಲೈ 24ರಂದು ಮುಗಿದಿದ್ದು, ಎರಡನೇ ಪಂದ್ಯ ಜುಲೈ 2ರಂದು ಆರಂಭವಾಗಲಿರುವ ಕಾರಣ ಬೂಮ್ರಾ ಅವರಿಗೆ ಸುಧಾರಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಇದೆ. ಆದರೆ ದೇಹ ಕೇಳುವುದೇ ಎಂಬುದು ಬೂಮ್ರಾ ಅವರಷ್ಟೇ ಹೇಳಬಲ್ಲರು.

ಮೊದಲ ಟೆಸ್ಟ್‌ನಲ್ಲಿ ಬೂಮ್ರಾ ಮಾತ್ರ ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಆತಂಕ ಮೂಡಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲನ್ನೂ ಪಡೆದಿದ್ದರು. ಆ ಪಂದ್ಯದಲ್ಲಿ ಅವರು ಒಟ್ಟು 44.4 ಓವರುಗಳನ್ನು ಮಾಡಿದ್ದರು.

ಬೂಮ್ರಾ ಅವರಿಲ್ಲದ ವೇಗದ ದಾಳಿ ಎದುರಾಳಿ ತಂಡದ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲದು. ಜೊತೆಗೆ ಭಾರತ ತಂಡದ ತಲೆನೋವನ್ನು ಹೆಚ್ಚಿಸಬಲ್ಲದು. ಬೂಮ್ರಾ ಮೂರು ಟೆಸ್ಟ್‌ಗಳಿಗೆ ಮಾತ್ರ ಲಭ್ಯರಾಗುವರೆಂದು ಸರಣಿಯ ಆರಂಭದಲ್ಲೇ ಕೋಚ್‌ ಗೌತಮ್  ಗಂಭೀರ್‌  ಹೇಳಿದ್ದರು.

‘ತಂಡದ ಚಿಂತಕರ ಚಾವಡಿಗೆ ಈ ಬಗ್ಗೆ (ಬೂಮ್ರಾ ಆಡಿಸುವ ಬಗ್ಗೆ) ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಅವರ ಕಾರ್ಯದೊತ್ತಡ ಹೇಗೆ ನಿರ್ವಹಿಸಬೇಕು ಎಂಬುದು ಚಿಂತಕರ ಚಾವಡಿಗೆ ಚೆನ್ನಾಗಿ ಗೊತ್ತಿರುತ್ತದೆ’ ಎಂದು ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ತಿಳಿಸಿದರು.

‘ಬೂಮ್ರಾ ಅವರಿಗೆ ಎರಡು ಟೆಸ್ಟ್‌ಗಳ ಮಧ್ಯೆ ಒಂದು ವಾರದ ಸಮಯವಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರಕರ್‌, ಗೌತಮ್ ಗಂಭೀರ್‌ ಮತ್ತು ನಾಯಕ ಶುಭಮನ್ ಗಿಲ್ ಅವರಿಗೆ ಬಿಟ್ಟಿದ್ದು. ಟೆಸ್ಟ್‌ ಆರಂಭಕ್ಕೆ ಒಂದು ದಿನ ಮೊದಲು ಅವರು ಈ ಬಗ್ಗೆ ನಿರ್ಧಾರಕ್ಕೆ ಬರಬಹುದು’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಆದರೆ ಎರಡನೇ ಮತ್ತು ಮೂರನೇ ಟೆಸ್ಟ್‌ ನಡುವೆ ಇರುವುದು ಕೇವಲ ಮೂರು ದಿನಗಳ ಅಂತರ. ಲಾರ್ಡ್ಸ್‌ನಲ್ಲಿ ಮೂರನೇ ಟೆಸ್ಟ್‌ ಜುಲೈ 10 ರಿಂದ 14ರವರೆಗೆ ನಡೆಯಲಿದ್ದು, ಬೂಮ್ರಾ ಈ ಎರಡೂ ಟೆಸ್ಟ್‌ಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.