ADVERTISEMENT

ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯ: ನಾಯಕ ರಾಹುಲ್‌ಗೆ ಫಿಟ್‌ನೆಸ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 13:26 IST
Last Updated 17 ಆಗಸ್ಟ್ 2022, 13:26 IST
ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಕೆ.ಎಲ್‌.ರಾಹುಲ್‌ ಹಾಗೂ ಸಹ ಆಟಗಾರರು ವಿಶ್ರಾಂತಿ ಪಡೆದರು –ಪಿಟಿಐ ಚಿತ್ರ
ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಕೆ.ಎಲ್‌.ರಾಹುಲ್‌ ಹಾಗೂ ಸಹ ಆಟಗಾರರು ವಿಶ್ರಾಂತಿ ಪಡೆದರು –ಪಿಟಿಐ ಚಿತ್ರ   

ಹರಾರೆ:ಗಾಯದಿಂದ ಚೇತರಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಕಣಕ್ಕಿಳಿಯಲಿರುವ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಅವರಿಗೆ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯ ಫಿಟ್‌ನೆಸ್‌ ‘ಪರೀಕ್ಷೆ’ ಎನಿಸಿಕೊಂಡಿದೆ.

ಭಾರತ– ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ರೋಹಿತ್‌ ಶರ್ಮ ಅನುಪಸ್ಥಿತಿಯಲ್ಲಿ ತಂಡವನ್ನು ರಾಹುಲ್ ಮುನ್ನಡೆಸುತ್ತಿದ್ದಾರೆ.

ಸರಣಿಯಲ್ಲಿ ಶುಭಾರಂಭ ಮಾಡುವ ಜತೆಯಲ್ಲೇ, ಭರ್ಜರಿ ಆಟವಾಡಿ ತಮ್ಮ ಫಾರ್ಮ್‌ ಹಾಗೂ ಫಿಟ್‌ನೆಸ್‌ ತೋರಿಸುವ ಸವಾಲು ಅವರ ಮೇಲಿದೆ. ಹರ್ನಿಯಾ ಶಸ್ತ್ರಚಿಕಿತ್ಸೆ ಮತ್ತು ಗಾಯದ ಕಾರಣದಿಂದಾಗಿ ಕರ್ನಾಟಕದ ಆಟಗಾರ ಎರಡೂವರೆ ತಿಂಗಳು ಅಂಗಳದಿಂದ ದೂರವುಳಿದಿದ್ದರು.

ADVERTISEMENT

ಏಷ್ಯಾಕಪ್ ಟೂರ್ನಿ ಮತ್ತು ಟಿ20 ವಿಶ್ವಕಪ್‌ ಮುಂದಿರುವ ಕಾರಣ ಅಲ್ಪ ಅವಧಿಯಲ್ಲಿ ಫಾರ್ಮ್‌ ಕಂಡುಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದು, ಭಾರತದ ಬ್ಯಾಟರ್‌ಗಳಿಗೆ ದೊಡ್ಡ ಮೊತ್ತ ಪೇರಿಸುವುದು ಕಷ್ಟವೆನಿಸದು. ಜಿಂಬಾಬ್ವೆ ತಂಡ, ಬಾಂಗ್ಲಾದೇಶದ ವಿರುದ್ಧ ಇತ್ತೀಚೆಗೆ ನಡೆದ ಸರಣಿಯ ಪಂದ್ಯದಲ್ಲಿ 300ಕ್ಕೂ ಅಧಿಕ ರನ್‌ಗಳನ್ನು ಬೆನ್ನಟ್ಟಿ ಗೆಲುವು ಪಡೆದಿತ್ತು.

ರಾಹುಲ್‌ ಅಲ್ಲದೆ ಶಿಖರ್‌ ಧವನ್, ಶುಭಮನ್‌ ಗಿಲ್‌, ದೀಪಕ್‌ ಹೂಡಾ ಮತ್ತು ಸಂಜು ಸ್ಯಾಮ್ಸನ್‌ ಅವರನ್ನೊಳಗೊಂಡ ಭಾರತದ ಬ್ಯಾಟಿಂಗ್‌ ವಿಭಾಗವು ಜಿಂಬಾಬ್ವೆ ಬೌಲರ್‌ಗಳ ಮೇಲೆ ಸವಾರಿ ಮಾಡಲು ಸಜ್ಜಾಗಿದೆ.

ಆರು ತಿಂಗಳ ಬಳಿಕ ತಂಡಕ್ಕೆ ಮರಳಿರುವ ಬೌಲರ್‌ ದೀಪಕ್‌ ಚಾಹರ್‌, ಹಳೆಯ ಲಯಕ್ಕೆ ಮರಳುತ್ತಿರುವ ಸ್ಪಿನ್ನರ್‌ ಕುಲದೀಪ್ ಯಾದವ್‌ ಅವರಿಗೂ ಈ ಸರಣಿ ಮಹತ್ವದ್ದಾಗಿದೆ.

ಪವರ್‌ಪ್ಲೇ ಅವಧಿಯಲ್ಲಿ ಸ್ವಿಂಗ್‌ ಬೌಲಿಂಗ್‌ ಮಾಡುವ ಮತ್ತು ಕೊನೆಯ ಓವರ್‌ಗಳಲ್ಲಿ ಬೀಸಾಟವಾಡುವ ಸಾಮರ್ಥ್ಯ ಹೊಂದಿರುವ ಚಾಹರ್‌, ತಂಡದಲ್ಲಿ ಸ್ಥಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ.

ರೆಗಿಸ್ ಚಕಾಬ್ವಾ ನೇತೃತ್ವದ ಜಿಂಬಾಬ್ವೆ ತಂಡದಲ್ಲಿ ಯುವ ಆಟಗಾರರೇ ಹೆಚ್ಚು ಇದ್ದಾರೆ. ಬಾಂಗ್ಲಾ ಎದುರಿನ ಸರಣಿ ಗೆಲುವು ಆ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಿದೆ.

ತಂಡಗಳು

ಭಾರತ: ಕೆ.ಎಲ್. ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಶಹಬಾಜ್‌ ಅಹ್ಮದ್

ಜಿಂಬಾಬ್ವೆ: ರೆಗಿಸ್ ಚಕಾಬ್ವಾ (ನಾಯಕ), ರಿಯಾನ್ ಬರ್ಲ್, ತನಾಕಾ ಚಿವಾಂಗಾ, ಬ್ರಾಡ್ಲಿ ಇವಾನ್ಸ್, ಲೂಕ್ ಜಾಂಗ್ವೆ, ಇನೊಸೆಂಟ್ ಕೈಯಾ, ತಕುಡಾವಾಂಶೆ ಕೈಟಾನೊ, ಕ್ಲೈವ್‌ ಮೆಡಾಂಡೆ, ವೆಸ್ಲಿ ಮೆಡೆವೆರೆ, ಟ್ಯಾಡಿವನಾಶೆ ಮರುಮನಿ, ಜಾನ್ ಮಸಾರಾ, ಟೋನಿ ಮುನ್ಯಾಂಗೊ, ರಿಚರ್ಡ್ ಎನ್‌ಗರ್ವಾ, ವಿಕ್ಟರ್ ನಯುಚಿ, ಸಿಕಂದರ್ ರಝಾ, ಮಿಲ್ಟನ್ ಶುಂಭಾ, ಡೊನಾಲ್ಡ್ ತಿರಿಪಾನೊ

ಪಂದ್ಯ ಆರಂಭ: ಮಧ್ಯಾಹ್ನ 12.45 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.