ADVERTISEMENT

ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯ ಇಂದು: ಸರಣಿ ಕೈವಶದ ವಿಶ್ವಾಸದಲ್ಲಿ ಭಾರತ

ವಿರಾಟ್ ಕೊಹ್ಲಿ ಆಟ ಅನುಮಾನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:30 IST
Last Updated 13 ಜುಲೈ 2022, 19:30 IST
ರೋಹಿತ್ ಶರ್ಮಾ 
ರೋಹಿತ್ ಶರ್ಮಾ    

ಲಂಡನ್ (ಪಿಟಿಐ): ಜಸ್‌ಪ್ರೀತ್ ಬೂಮ್ರಾ ದಾಳಿಗೆ ಒಲಿದ ಮೊದಲ ಪಂದ್ಯದ ಅಮೋಘ ಜಯದ ಹುಮ್ಮಸ್ಸಿನಲ್ಲಿರುವ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಗುರುವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಎರಡನೇ ಪಂದ್ಯದಲ್ಲಿ ಜಯಿಸುವ ಛಲದಲ್ಲಿ ರೋಹಿತ್ ಶರ್ಮಾ ಬಳಗವಿದೆ. ಈಚೆಗೆ ಟಿ20 ಸರಣಿಯಲ್ಲಿ 2–1ರಿಂದ ಜಯಿಸಿದ್ದ ತಂಡವು ಮಂಗಳವಾರ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಆರು ವಿಕೆಟ್‌ಗಳನ್ನು ಉರುಳಿಸಿದ್ದ ಬೂಮ್ರಾ ಗೆಲುವಿನ ರೂವಾರಿಯಾಗಿದ್ದರು.

ಈ ಪಂದ್ಯದಲ್ಲಿಯೂ ಬೂಮ್ರಾ, ಶಮಿ ಮತ್ತು ಪ್ರಸಿದ್ಧ ಕೃಷ್ಣ ಅವರು ಸ್ಥಾನ ಉಳಿಸಿಕೊಳ್ಳುವುದು ಖಚಿತ. ಬ್ಯಾಟಿಂಗ್‌ನಲ್ಲಿ ಒಂದೊಮ್ಮೆ ವಿರಾಟ್ ಕೊಹ್ಲಿ ಮರಳಿದರೆ, ಶ್ರೇಯಸ್ ಅಯ್ಯರ್ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಶ್ರೇಯಸ್ ಇಬ್ಬರೂ ಶಾರ್ಟ್‌ ಪಿಚ್‌ ಎಸೆತಗಳನ್ನು ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಅಂತಹ ಎಸೆತಗಳನ್ನು ಸಮರ್ಥವಾಗಿ ಆಡಬಲ್ಲ ದೀಪಕ್ ಹೂಡಾ ಆಯ್ಕೆಯೂ ನಾಯಕನ ಮುಂದಿದೆ.

ADVERTISEMENT

ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಳೆದುಕೊಂಡಿದ್ದ ರೋಹಿತ್, ಮೊದಲ ಹಣಾಹಣಿಯಲ್ಲಿ ಅಜೇಯ ಅರ್ಧಶತಕ ಗಳಿಸಿರುವುದು ಸಮಾಧಾನಕರ ಬೆಳವಣಿಗೆ. ಶಿಖರ್ ಧವನ್ ಇನ್ನೊಂದು ಅವಕಾಶ ಪಡೆಯುವುದು ಬಹುತೇಕ ದೃಢ. ಸೂರ್ಯಕುಮಾರ್ ಯಾದವ್, ಜಡೇಜ, ಹಾರ್ದಿಕ್ ಕೂಡ ಕಣಕ್ಕಿಳಿಯಲಿದ್ದಾರೆ.

ಆದರೆ, ಆತಿಥೇಯ ತಂಡವು ಬಹಳಷ್ಟು ಸುಧಾರಣೆಗಳೊಂದಿಗೆ ಕಣಕ್ಕಿಳಿಯುವ ಪ್ರಯತ್ನದಲ್ಲಿದೆ. ಪ್ರಥಮ ಪಂದ್ಯದಲ್ಲಿ ತಂಡದ ಜೇಸನ್, ರೂಟ್, ಸ್ಟೋಕ್ಸ್ ಮತ್ತು ಲಿಯಾಮ್ ಸೊನ್ನೆ ಸುತ್ತಿದ್ದರು. ಅಲ್ಲದೇ ಇನ್ನುಳಿದ ಪ್ರಮುಖ ಬ್ಯಾಟರ್‌ಗಳು ಎರಡಂಕಿ ಕೂಡ ತಲುಪಲಿಲ್ಲ. ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡರೆ, ಈ ಪಂದ್ಯದಲ್ಲಿ ಜಯಿಸುವ ಆಸೆ ಈಡೇರಬಹುದು. ಅದರೊಂದಿಗೆ ಇಂಗ್ಲೆಂಡ್‌ಗೆ ಸರಣಿ ಜಯದ ಕನಸು ಜೀವಂತವಾಗಿ ಉಳಿಯಬಹುದು.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ಧಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಆರ್ಷದೀಪ್ ಸಿಂಗ್

ಇಂಗ್ಲೆಂಡ್: ಜೊಸ್ ಬಟ್ಲರ್ (ನಾಯಕ), ಮೋಯಿನ್ ಅಲಿ, ಜೊನಾಥನ್ ಬೆಸ್ಟೊ, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರೇಗ್ ಒವರ್ಟನ್, ಮ್ಯಾಥ್ಯೂ ಪಾರ್ಕಿನ್ಸನ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲಿ, ಡೇವಿಡ್ ವಿಲಿ.

ಪಂದ್ಯ ಆರಂಭ: ಸಂಜೆ 5.30ರಿಂದ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್, ಸೋನಿ ಲಿವ್.

--

ಪಿಚ್ ಹೇಗಿದೆ?

ಲಾರ್ಡ್ಸ್‌ ಕ್ರೀಡಾಂಗಣದ ಪಿಚ್ ಮೊದಲಿನಿಂದಲೂ ಸ್ವಿಂಗ್ ಎಸೆತಗಳಿಗೆ ಹೆಚ್ಚು ಉತ್ತೇಜನ ನೀಡುವ ಗುಣ ಹೊಂದಿದೆ. ಇಲ್ಲಿ 70 ಏಕದಿನ ಪಂದ್ಯಗಳು ನಡೆದಿವೆ. ಅದರಲ್ಲಿ ಇಲ್ಲಿ ದಾಖಲಾದ ಗರಿಷ್ಠ ಮೊತ್ತ 238 ರನ್. ಎರಡೂ ಇನಿಂಗ್ಸ್‌ಗಳಲ್ಲಿಯೂ ಬೌಲರ್‌ಗಳಿಗೆ ಹೆಚ್ಚು ನರವು ದೊರಕುವ ಸ್ಥಳ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.