ADVERTISEMENT

ಕೆಎಸ್‌ಸಿಎ ಚುನಾವಣೆ: ನಾಮಪತ್ರ ಸಲ್ಲಿಕೆ ಭರಾಟೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:20 IST
Last Updated 30 ಸೆಪ್ಟೆಂಬರ್ 2019, 20:20 IST
ಸೋಮವಾರ ನಾಮಪತ್ರ ಸಲ್ಲಿಸಲು ಬಂದ ರೋಜರ್ ಬಿನ್ನಿ, ಸಂತೋಷ್ ಮೆನನ್, ವಿನಯ್ ಮೃತ್ಯುಂಜಯ್,  ಅಭಿರಾಮ್ ಮತ್ತಿತರರೊಂದಿಗೆ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರೂ ಇದ್ದರು  –ಪ್ರಜಾವಾಣಿ ಚಿತ್ರ
ಸೋಮವಾರ ನಾಮಪತ್ರ ಸಲ್ಲಿಸಲು ಬಂದ ರೋಜರ್ ಬಿನ್ನಿ, ಸಂತೋಷ್ ಮೆನನ್, ವಿನಯ್ ಮೃತ್ಯುಂಜಯ್,  ಅಭಿರಾಮ್ ಮತ್ತಿತರರೊಂದಿಗೆ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರೂ ಇದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಇದೇ ಮೂರರಂದು ನಡೆಯಲಿರುವ ಚುನಾವಣೆಯ ಕಾವು ಏರುತ್ತಿದೆ. ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಬೆಂಬಲಿತ ಬಣ ಮತ್ತು ಸ್ವಚ್ಛ ಕ್ರಿಕೆಟ್‌ ಬಣದ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಆಡಳಿತ ಸಮಿತಿಯ ಐದು ಪದಾಧಿಕಾರಿಗಳ ಸ್ಥಾನ ಮತ್ತು 11 ಮಂದಿ ವ್ಯವಸ್ಥಾಪನ ಸದಸ್ಯರ ಸ್ಥಾನಗಳಿಗೆ ಒಟ್ಟು 39 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಚುನಾವಣಾಧಿಕಾರಿ ಎಂ.ಆರ್. ಹೆಗಡೆ ಅವರು ನಾಮಪತ್ರಗಳನ್ನು ಸ್ವೀಕರಿಸಿದರು. ಐವರು ಪದಾಧಿಕಾರಿಗಳ ಸ್ಥಾನಗಳಿಗೆ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಮತ್ತು ಕ್ಯಾಪ್ಟನ್‌ ಎಂ.ಎಂ. ಹರೀಶ್ ಪ್ರತಿಸ್ಪರ್ಧಿಗಳಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್, ಜೆ. ಅಭಿರಾಮ್, ಕೆ.ಎಸ್. ರಘುರಾಮ್ ಮತ್ತು ಸಿದ್ಧಲಿಂಗ ಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅಭಿರಾಮ್ ಅವರು ಉಪಾಧ್ಯಕ್ಷ ಸ್ಥಾನಕ್ಕೂ ನಾಮಪತ್ರ ಹಾಕಿದ್ದಾರೆ.

ವಿನಯ್ ಮೃತ್ಯುಂಜಯ, ಬಿ.ಎನ್. ಮಧುಕಾರ್, ವೈ.ಎಸ್. ವೆಂಕಟೇಶ್ ಗೌಡ ಮತ್ತು ಇ.ಎಸ್. ಜಯರಾಮ್ ಅವರು ಖಜಾಂಚಿ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.

ADVERTISEMENT

ವ್ಯವಸ್ಥಾಪನ ಮಂಡಳಿ ಸದಸ್ಯತ್ವಕ್ಕೆ 22 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಹಿರಿಯ ಕ್ರಿಕೆಟಿಗ ತಿಲಕ್ ನಾಯ್ಡು, ಶಾಂತಾ ರಂಗಸ್ವಾಮಿ ಪ್ರಮುಖರಾಗಿದ್ದಾರೆ. ‘ನಾಮಪತ್ರ ಸಲ್ಲಿಸಲು ಸೋಮವಾರ ಮಧ್ಯಾಹ್ನ 3ಗಂಟೆಯವರೆಗೆ ಅವಕಾಶ ಇತ್ತು. ನಾಮಪತ್ರಗಳನ್ನು ಮಂಗಳವಾರ ಮಧ್ಯಾಹ್ನ ಮೂರರೊಳಗೆ ಮರಳಿ ಪಡೆಯಲು ಅವಕಾಶ ಇದೆ’ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.