ADVERTISEMENT

ಯುಎಇ ಪಿಚ್‌ಗಳಲ್ಲಿ 160 ರನ್‌ಗಳ ಗುರಿ ಸವಾಲಿನದ್ದು: ಹೆಸನ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:03 IST
Last Updated 8 ಸೆಪ್ಟೆಂಬರ್ 2020, 17:03 IST
ಮೈಕ್ ಹೆಸನ್
ಮೈಕ್ ಹೆಸನ್   

ದುಬೈ: ಅಬುಧಾಬಿ ಮತ್ತು ದುಬೈ ಕ್ರೀಡಾಂಗಣಗಳಲ್ಲಿರುವ ಪಿಚ್‌ಗಳಲ್ಲಿ 150–160 ರನ್‌ಗಳ ಮೊತ್ತದ ಗುರಿಯೂ ಸವಾಲಿನದ್ದಾಗಲಿದೆ ಎಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚ್ ಮೈಕ್ ಹೆಸನ್ ಅಭಿಪ್ರಾಯಪಟ್ಟಿದ್ದಾರೆ.

‘ಅಬುಧಾಬಿಯಲ್ಲಿರುವ ಕ್ರೀಡಾಂಗಣದ ಬೌಂಡರಿ ದೊಡ್ಡದಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಬ್ಯಾಟಿಂಗ್ ಪಿಚ್, ಬೌಂಡರಿಲೈನ್‌ಗಳ ಅಂತರ ಚಿಕ್ಕದಾಗಿರುವುದರಿಂದ ಬೃಹತ್ ಮೊತ್ತ ಗಳಿಸಲು ಸಾಧ್ಯವಿದೆ. ಆದರೆ ಇಲ್ಲಿಯ ಪರಿಸ್ಥಿತಿ ವಿಭಿನ್ನವಾಗಿದೆ. 150 –160 ರನ್‌ಗಳ ಮೊತ್ತವು ಕೂಡ ಎದುರಾಳಿಗಳಿಗೆ ಸವಾಲೊಡ್ಡಲಿದೆ’ ಎಂದು ಆರ್‌ಸಿಬಿ ಯೂಟ್ಯೂಬ್‌ನಲ್ಲಿ ಹೇಳಿದ್ದಾರೆ.

‘ಅಬುಧಾಬಿಯಲ್ಲಿ ವೇಗಿಗಳಿಗೆ ಪೂರಕವಾದ ಪಿಚ್‌ ಇದೆ. ಈ ಅಂಗಣದಲ್ಲಿ ಅಷ್ಟೇನೂ ಸ್ಪಿನ್ ಆಗುವುದಿಲ್ಲ. ಆದರೆ, ದುಬೈ ಮತ್ತು ಶಾರ್ಜಾ ಕ್ರೀಡಾಂಗಣಗಳಲ್ಲಿ ಚೆಂಡು ಜಾರುವ ಸಾಧ್ಯತೆ ಹೆಚ್ಚು’ ಎಂದಿದ್ದಾರೆ.

ADVERTISEMENT

‘ಅಬುಧಾಬಿ ಕ್ರೀಡಾಂಗಣದಲ್ಲಿ ಡೆತ್ ಓವರ್ ಗಳನ್ನು ಹಾಕುವುದು ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಭಿನ್ನವಾಗುತ್ತದೆ. ಆದ್ದರಿಂದ ಇಲ್ಲಿ ಈ ಹಿಂದೆ ನಡೆದಿರುವ ಪಂದ್ಯಗಳ ವಿಡಿಯೊ ವಿಶ್ಲೇಷಣೆಗೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದೇವೆ. ಅದರಿಂದಾಗಿ ನಮಗೆ ಯೋಜನೆ ರೂಪಿಸಲು ಸಾಧ್ಯವಾಗುತ್ತಿದೆ. ನಾವು ಎಲ್ಲಿ ಸಶಕ್ತರಾಗಿದ್ದೇವೆ ಮತ್ತು ಯಾವ ವಿಭಾಗಗಳಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದು ಯೋಜಿಸುತ್ತಿದ್ದೇವೆ’ ಎಂದರು.

‘ಇಲ್ಲಿಯ ಹವಾಗುಣ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಆಟವಾಡುವ ಸಾಮರ್ಥ್ಯವಿರುವ ಆಟಗಾರರನ್ನು ಗುರುತಿಸುತ್ತಿದ್ದೇವೆ. ಇನಿಂಗ್ಸ್‌ ಫಿನಿಷರ್‌ ಆಗುವ ಬೌಲರ್‌ಗಳ ಹುಡುಕಾಟಕ್ಕೆ ಹೆಚ್ಚು ಒತ್ತು ನೀಡಿದ್ದೇವೆ’ ಎಂದರು.

2016ರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಫೈನಲ್ ತಲುಪಿತ್ತು. ಆದರೆ ಪ್ರಶಸ್ತಿ ಸನಿಹ ಎಡವಿತ್ತು. ನಂತರ ಫೈನಲ್ ಪ್ರವೇಶಿಸಲು ವಿರಾಟ್ ಬಳಗಕ್ಕೆ ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.