ADVERTISEMENT

ದಿಗ್ಗಜರ ಬೆಳೆಸಿದ ಕೋಚ್‌

ಪಿಟಿಐ
Published 3 ಜನವರಿ 2019, 3:00 IST
Last Updated 3 ಜನವರಿ 2019, 3:00 IST
ಸಚಿನ್ ತೆಂಡೂಲ್ಕರ್‌ಗೆ ಬ್ಯಾಟಿಂಗ್ ತರಬೇತಿ ನೀಡುತ್ತಿರುವ ರಮಾಕಾಂತ್‌ ಅಚ್ರೇಕರ್‌
ಸಚಿನ್ ತೆಂಡೂಲ್ಕರ್‌ಗೆ ಬ್ಯಾಟಿಂಗ್ ತರಬೇತಿ ನೀಡುತ್ತಿರುವ ರಮಾಕಾಂತ್‌ ಅಚ್ರೇಕರ್‌   

ಮುಂಬೈ: ಅವರು ಸ್ವತಃ ಆಡಿದ್ದು ಒಂದೇ ಪ್ರಥಮ ದರ್ಜೆ ಪಂದ್ಯ. ಆದರೆ ದಿಗ್ಗಜ ಆಟಗಾರರನ್ನು ಬೆಳೆಸಲು ಅವರಿಗೆ ಸಾಧ್ಯವಾಯಿತು. ದಾಖಲೆಗಳ ಮಾಲೆ ಕಟ್ಟಿದ ಸಚಿನ್ ತೆಂಡೂಲ್ಕರ್‌ ಅವರ ಸಾಧನೆಯ ಹಿಂದಿನ ಶಕ್ತಿ ಎನಿಸಿಕೊಂಡರು. ರಮಾ ಕಾಂತ್‌ ಅಚ್ರೇಕರ್‌ ಅವರ ಕಣ್ಣಿಗೆ ಬಿದ್ದ ತೆಂಡೂಲ್ಕರ್ ವಿಶ್ವದಾಖಲೆಯ ವೀರನಾದರು. ಸರ್ ಡೊನಾಲ್ಡ್ ಬ್ರಾಡ್ಮನ್‌ ಅವರ ನಂತರ ಕ್ರಿಕೆಟ್‌ನ ದಂತಕತೆಯಾದರು.

ಟೆಸ್ಟ್‌ನಲ್ಲಿ 15,921 ರನ್ ಸಂಪಾದಿಸಿರುವ ಸಚಿನ್ ತೆಂಡೂಲ್ಕರ್‌ ಏಕದಿನ ಕ್ರಿಕೆಟ್‌ನಲ್ಲಿ 18,426 ರನ್‌ ಗಳಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಬ್ಯಾಟಿಂಗ್ ವಿಭಾಗದ ಬಹುತೇಕ ಎಲ್ಲ ದಾಖಲೆಗಳೂ ಅವರ ಹೆಸರಿನಲ್ಲಿವೆ. ತಮ್ಮ ಸಾಧನೆಯ ಹಿಂದೆ ಅಚ್ರೇ ಕರ್ ಅವರ ಮಾರ್ಗದರ್ಶನದ ಬಲ ಇದೆ ಎಂದು ಸಚಿನ್ ಸದಾ ಹೇಳುತ್ತಿದ್ದರು.

ದಾದರ್‌ನ ಪ್ರಸಿದ್ಧ ಶಿವಾಜಿ ಪಾರ್ಕ್‌ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ಅವರಿಗೆ ಅಚ್ರೆಕರ್‌ ಕೋಚಿಂಗ್ ನೀಡಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ಸಮೀರ್ ದಿಘೆ ಮತ್ತು ಬಲ್ವಿಂದರ್ ಸಿಂಗ್‌ ಸಂಧು ಅವರಿಗೂ ಅಚ್ರೇಕರ್ ತರಬೇತಿ ನೀಡಿದ್ದಾರೆ.

‘ಚೆನ್ನಾಗಿ ಆಡಿದ್ದಿ ಎಂದು ಸರ್ ನನಗೆ ಎಂದೂ ಹೇಳುತ್ತಿರಲಿಲ್ಲ. ಆದರೆ ಭೇಲ್ ಪೂರಿ ಮತ್ತು ಪಾನಿಪೂರಿ ತಿನ್ನಿಸಲು ಕರೆದುಕೊಂಡು ಹೋಗುತ್ತಿದ್ದಾಗ ಸರ್ ಖುಷಿಯಾಗಿದ್ದಾರೆ ಎಂದು ನನಗೆ ತಿಳಿಯುತ್ತಿತ್ತು’ ಎಂದು ತೆಂಡೂಲ್ಕರ್‌ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದರು.

ಅಚ್ರೇಕರ್ ಗರಡಿಯಲ್ಲಿ ಬೆಳೆದಿದ್ದ ಸಚಿನ್ ಮತ್ತು ಕಾಂಬ್ಳಿ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ವಿಶ್ವ ದಾಖಲೆಯ 664 ರನ್‌ಗಳ ಜೊತೆಯಾಟ ಆಡಿ ಗಮನ ಸೆಳೆದಿದ್ದರು.

ಬ್ಯಾಂಕ್‌ ನೌಕರನಾಗಿದ್ದ ರಮಾ ಕಾಂತ್ ಅಚ್ರೇಕರ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೇವಲ ಒಂದು ಪಂದ್ಯ ಆಡಿದ್ದರು. ನಂತರ ತರಬೇತಿಗೆ ಒತ್ತು ನೀಡಿದರು. ಅವರಿಗೆ 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದಿತ್ತು.‌

***

ರಮಾಕಾಂತ್‌ ಅಚ್ರೇಕರ್ ಸರ್‌ ಅವರಿಂದಾಗಿ ಇನ್ನು ಸ್ವರ್ಗದಲ್ಲಿ ಕ್ರಿಕೆಟ್‌ ಸಮೃದ್ಧವಾಗಿ ಬೆಳೆಯಲಿದೆ.

–ಸಚಿನ್ ತೆಂಡೂಲ್ಕರ್‌, ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.