ಬೆಂಗಳೂರು: ಆಫ್ ಸ್ಪಿನ್ನರ್ ಅಭಿಷೇಕ್ ಅಹ್ಲಾವತ್ (34ಕ್ಕೆ 4) ಅವರ ದಾಳಿಗೆ ತತ್ತರಿಸಿದ ಗೋವಾ ತಂಡವು ಮಂಗಳವಾರ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನ ಎರಡನೇ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿದಿದೆ. ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ತಂಡಕ್ಕೆ ಗೆಲುವಿನ ಕನಸು ಚಿಗುರಿದೆ.
ನಗರದ ಹೊರವಲಯದಲ್ಲಿರುವ ಆಲೂರಿನ ಪ್ಲಾಟಿನಂ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 62 ರನ್‌ಗಳ ಮುನ್ನಡೆ ಪಡೆದ ಗೋವಾ ತಂಡವು ಮೂರನೇ ದಿನದಾಟಕ್ಕೆ 73 ಓವರ್‌ಗಳಲ್ಲಿ 8 ವಿಕೆಟ್‌ಗೆ 168 ರನ್ ಗಳಿಸಿದೆ.
ಒಂದು ಹಂತದಲ್ಲಿ 128 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು. ಅರ್ಜುನ್ ತೆಂಡೂಲ್ಕರ್ (ಔಟಾಗದೇ 30) ಮತ್ತು ಸಮರ್ ದುಬಾಶಿ (ಔಟಾಗದೇ 14) ಅವರು ಮುರಿಯದ ಒಂಬತ್ತನೇ ವಿಕೆಟ್‌ಗೆ 40 ರನ್ ಸೇರಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಗೋವಾ ಒಟ್ಟಾರೆ 230 ರನ್‌ಗಳ ಮುನ್ನಡೆ ಪಡೆದಿದೆ.
ಸೋಮವಾರ 8 ವಿಕಟ್‌ಗೆ 245 ರನ್ ಗಳಿಸಿದ್ದ ಕಾರ್ಯದರ್ಶಿ ಇಲೆವೆನ್ ತಂಡವು 276 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ದಿನ ಔಟಾಗದೇ 89 ರನ್ ಗಳಿಸಿದ್ದ ಕೃತಿಕ್ ಕೃಷ್ಣ 95 ರನ್ ಗಳಿಸಿ, ಐದು ರನ್‌ಗಳಿಂದ ಶತಕ ವಂಚಿತರಾದರು.
ಸಂಕ್ಷಿಪ್ತ ಸ್ಕೋರ್: ಆಲೂರು ಕ್ರೀಡಾಂಗಣ: ಗೋವಾ: 338 ಮತ್ತು 73 ಓವರ್‌ಗಳಲ್ಲಿ 8 ವಿಕೆಟ್‌ಗೆ 168 (ಲಲಿತ್ ಯಾದವ್ 27, ಅರ್ಜುನ್ ತೆಂಡೂಲ್ಕರ್ ಔಟಾಗದೇ 25; ಅಭಿಷೇಕ್ ಅಹ್ಲಾವತ್ 34ಕ್ಕೆ 4, ಮಾಧವ್ ಪಿ. ಬಜಾಜ್ 51ಕ್ಕೆ 2, ಧ್ರುವ್ ಪಿ. 22ಕ್ಕೆ 2). ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್: ಮೊದಲ ಇನಿಂಗ್ಸ್: 97.1 ಓವರ್‌ಗಳಲ್ಲಿ 276 (ಕೃತಿಕ್ ಕೃಷ್ಣ 95; ಅರ್ಜುನ್ ತೆಂಡೂಲ್ಕರ್ 54ಕ್ಕೆ 3, ವಾಸುಕಿ ಕೌಶಿಕ್ 32ಕ್ಕೆ 2).
ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ: 425 ಮತ್ತು 66 ಓವರ್‌ಗಳಲ್ಲಿ 1 ವಿಕೆಟ್‌ಗೆ 233 (ಹರ್ಷ್ ಗೌಳಿ ಔಟಾಗದೇ 121, ಯಶ್ ದುಬೆ 76). ಹಿಮಾಚಲ ಪ್ರದೇಶ: 57.2 ಓವರ್‌ಗಳಲ್ಲಿ 204.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.