ADVERTISEMENT

ಗುಜರಾತ್‌ನಲ್ಲಿ ಜಗತ್ತಿನ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ

₹700 ಕೋಟಿ ಯೋಜನಾ ವೆಚ್ಚ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 7:00 IST
Last Updated 7 ಜನವರಿ 2019, 7:00 IST
   

ಅಹಮದಾಬಾದ್‌: ಜಗತ್ತಿನ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿದೆ. 63 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣದ ಯೋಜನಾ ವೆಚ್ಚ ಅಂದಾಜು ₹700 ಕೋಟಿ.

ಇಲ್ಲಿನ ಮೊಟೆರಾದಲ್ಲಿ ನಿರ್ಮಾಣವಾಗುತ್ತಿರುವ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 1 ಲಕ್ಷ ಜನರು ಕುಳಿತು ಪಂದ್ಯ ವೀಕ್ಷಿಸುವ ವ್ಯವಸ್ಥೆ ಇರಲಿದೆ. ಗುಜರಾತ್‌ ಕ್ರಿಕೆಟ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಪರಿಮಲ್‌ ನಾಥವಾನಿ ಭಾನುವಾರ ನಿರ್ಮಾಣ ಕಾರ್ಯದ ಚಿತ್ರಗಳನ್ನು ಟ್ವೀಟ್‌ ಮಾಡಿದ್ದು, ’ರಾಜ್ಯ ಕ್ರಿಕೆಟ್‌ ಮಂಡಳಿಯ ಕನಸಿನ ಯೋಜನೆಯಾಗಿರುವ ಈ ಕ್ರೀಡಾಂಗಣ ಪೂರ್ಣಗೊಂಡ ಬಳಿಕ, ದೇಶದ ಹೆಮ್ಮೆಯ ಪ್ರತೀಕವಾಗಲಿದೆ’ ಎಂದಿದ್ದಾರೆ.

ಪಾಪ್ಯುಲಸ್‌ ವಿನ್ಯಾಸ ಸಂಸ್ಥೆ ಈ ಕ್ರೀಡಾಂಗಣದ ವಿನ್ಯಾಸ ಮಾಡಿದ್ದು, 63 ಎಕರೆ ವಿಸ್ತೀರ್ಣದ ನಿರ್ಮಾಣ ಕಾರ್ಯವನ್ನು ಎಲ್‌ ಆ್ಯಂಡ್‌ ಟಿಗೆ ವಹಿಸಲಾಗಿದೆ. ಈ ಕ್ರೀಡಾಂಗಣವು ಅಭ್ಯಾಸ ನಡೆಸಲು ಮೂರು ಮೈದಾನಗಳು ಹಾಗೂ ಒಳಾಂಗಣ ಕ್ರಿಕೆಟ್‌ ಅಕಾಡೆಮಿ ಒಳಗೊಂಡಿರಲಿದೆ.

ADVERTISEMENT

ವರದಿಗಳ ಪ್ರಕಾರ, ಕ್ರೀಡಾಂಗಣದ ಪ್ರವೇಶದಲ್ಲಿ ಸುಮಾರು 3 ಸಾವಿರ ಕಾರುಗಳು ಹಾಗೂ 10 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿರಲಿದೆ. 55 ಕೊಠಡಿಗಳು ಹಾಗೂ ಒಲಿಂಪಿಕ್‌ಗಳಲ್ಲಿ ಬಳಸುವ ವಿಸ್ತೀರ್ಣದ ಈಜುಕೊಳ ಹೊಂದಿರುವ ಕ್ಲಬ್‌ ಹೌಸ್‌ ಇರಲಿದೆ. ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ವಿಸ್ತಾರವಾದ ಸ್ಥಳಾವಕಾಶವಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.