ADVERTISEMENT

ನಿವೃತ್ತಿಗೇ ‘ವಿದಾಯ’ ಹೇಳಿದ ರಾಯುಡು

ಪಿಟಿಐ
Published 30 ಆಗಸ್ಟ್ 2019, 15:46 IST
Last Updated 30 ಆಗಸ್ಟ್ 2019, 15:46 IST
ಅಂಬಟಿ ರಾಯುಡು
ಅಂಬಟಿ ರಾಯುಡು   

ಚೆನ್ನೈ: ಎರಡು ತಿಂಗಳುಗಳ ಹಿಂದಷ್ಟೇ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅಂಬಟಿ ರಾಯುತು ಮತ್ತೆ ಅಂಗಳಕ್ಕೆ ಮರಳುತ್ತಿದ್ದಾರೆ. ಹೈದರಾಬಾದ್ ತಂಡದ ಪರವಾಗಿ ಮೂರು ಮಾದರಿಗಳಲ್ಲಿಯೂ ಆಡಲಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದ್ದರಿಂದ ಅವರು ಆಯ್ಕೆ ಸಮಿತಿಯ ವಿರುದ್ದ ಟೀಕೆ ಮಾಡಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಸಂದರ್ಭದಲ್ಲಿ ಅವರ ನಿರ್ಧಾರವು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.

‘ನಿವೃತ್ತಿ ನಿರ್ಧಾರವನ್ನು ಕೈಬಿಡಲು ಅಂಬಟಿ ತೀರ್ಮಾನಿಸಿದ್ದಾರೆ. ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ(ಎಚ್‌ಸಿಎ) ಪರ ಮೂರು ಮಾದರಿಗಳಲ್ಲಿಯೂ ಆಡಲು ಸಿದ್ಧವಾಗಿದ್ದಾರೆ’ ಎಂದು ಬಿಸಿಸಿಐ ಹಿರಿಯ ಸದಸ್ಯರ ರತ್ನಾಕರ ಶೆಟ್ಟಿ ಅವರು ತಮಗೆ ರಾಯುಡು ಬರೆದ ಪತ್ರ ಉಲ್ಲೇಖಿಸಿ ಹೇಳಿದ್ದಾರೆ.

ADVERTISEMENT

33 ವರ್ಷದ ರಾಯುಡು ಅವರು ಗುರುವಾರ ತಮ್ಮ ನಿರ್ಧಾರದ ಕುರಿತು ಎಚ್‌ಸಿಎಗೆ ಇಮೇಲ್ ಮಾಡಿದ್ದಾರೆ. ಅದರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್‌ ತಂಡ, ಹಿರಿಯ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮತ್ತು ಎಚ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥ ನೊಯೆಲ್ ಡೇವಿಡ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ರಾಯುಡು ಅವರು ನಿವೃತ್ತಿ ಪ್ರಕಟಿಸಿದ ಸಂದರ್ಭ ನನಗೆ ಅಚ್ಚರಿಯಾಗಿತ್ತು. ಅದೊಂದು ದುಡುಕಿನ ನಿರ್ಧಾರವಾಗಿತ್ತು. ಅವರಲ್ಲಿನ್ನೂ ಆಡುವ ಸಾಮರ್ಥ್ಯ ಸಾಕಷ್ಟಿದೆ. ಅವರ ಅನುಭವವು ಜೂನಿಯರ್ ಆಟಗಾರರಿಗೆ ಸ್ಫೂರ್ತಿಯಾಗಬೇಕು. ಆದ್ದರಿಂದ ಅವರು ತಂಡದಲ್ಲಿ ಇರುವುದು ಅವಶ್ಯಕ’ ಎಂದು ಶೆಟ್ಟಿ ಹೇಳಿದರು.

ರಾಯುಡು ಅವರು 2018ರಲ್ಲಿಯೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು. ನಿಗದಿಯ ಓವರ್‌ಗಳ ಕ್ರಿಕೆಟ್‌ಗಷ್ಟೇ ಗಮನ ಕೇಂದ್ರಿಕರಿಸುವುದಾಗಿ ಹೇಳಿದ್ದರು. ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಭಾರತ ತಂಡದ ಆಟಗಾರ ಶಿಖರ್ ಧವನ್ ಗಾಯಗೊಂಡು ಹೊರಗುಳಿದರು. ಆಗ ಕಾಯ್ದಿಟ್ಟ ಆಟಗಾರರಲ್ಲಿದ್ದ ಅಂಬಟಿ ಅವರನ್ನು ಪರಿಗಣಿಸಿರಲಿಲ್ಲ. ಮಯಂಕ್ ಅಗರವಾಲ್ ಅವರಿಗೆ ಸ್ಥಾನ ನೀಡಲಾಗಿತ್ತು. ಟೂರ್ನಿಯ ಆರಂಭದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸ್ಥಾನಕ್ಕೂ ಅವರನ್ನು ಪರಿಗಣಿಸಿರಲಿಲ್ಲ. ವಿಜಯಶಂಕರ್ ಅವರಿಗೆ ಅವಕಾಶ ನೀಡಲಾಗಿತ್ತು.

ತಂಡದ ಆಯ್ಕೆಯ ನಂತರ ಅವರು, ‘ತ್ರೀಡಿ ಕನ್ನಡಕ ಧರಿಸಿ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುತ್ತೇನೆ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.