ADVERTISEMENT

ಉತ್ತಮ ಸ್ಥಿತಿಯಲ್ಲಿ ಆಂಧ್ರ ತಂಡ

ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿ: ಮುನ್ನೂರು ದಾಟಿದ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 18:55 IST
Last Updated 5 ಆಗಸ್ಟ್ 2019, 18:55 IST
3 ವಿಕೆಟ್ ಕಬಳಿಸಿದ ಪುನೀತ್ ದಾತೆ ಸಂಭ್ರಮ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌
3 ವಿಕೆಟ್ ಕಬಳಿಸಿದ ಪುನೀತ್ ದಾತೆ ಸಂಭ್ರಮ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌   

ಬೆಂಗಳೂರು: ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ಮುನ್ನಡೆಯು ಆಂಧ್ರ ಕ್ರಿಕೆಟ್ ಸಂಸ್ಥೆಯನ್ನು ಉತ್ತಮ ಸ್ಥಿತಿಗೆ ತಲುಪಿಸಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದ ಮೂರನೇ ದಿನದಾಟದ ಮುಕ್ತಾಯಕ್ಕೆ ಆಂಧ್ರ ಒಟ್ಟಾರೆ 305 ರನ್‌ಗಳ ಮುನ್ನಡೆ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 313 ರನ್ ಗಳಿಸಿದ್ದ ಆಂಧ್ರ ಭಾನುವಾರದ ದಿನದಾಟ ಮುಕ್ತಾಯಗೊಂಡಾಗ ‘ಛತ್ತೀಸಗಡ ಕ್ರಿಕೆಟ್ ಸಂಘ’ದ ಏಳು ವಿಕೆಟ್ ಕಬಳಿಸಿತ್ತು. ಛತ್ತೀಸಗಡ 182 ರನ್‌ಗಳ ಹಿನ್ನಡೆಯಲ್ಲಿತ್ತು. ಸೋಮವಾರ 16 ರನ್‌ ಗಳಿಸುವಷ್ಟರಲ್ಲಿ ಉಳಿದ ಮೂರು ವಿಕೆಟ್‌ಗಳನ್ನು ಆಂಧ್ರ ಬೌಲರ್‌ಗಳು ಉರುಳಿಸಿದರು. ಈ ಮೂಲಕ ತಂಡ 166 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಇನಿಂಗ್ಸ್‌ನಲ್ಲಿ ಆಂಧ್ರ ತಂಡಕ್ಕೆ ಛತ್ತೀಸಗಡ ಬೌಲರ್‌ಗಳು ಪೆಟ್ಟು ನೀಡಿದರು. ಒಂಬತ್ತು ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡ ಆಂಧ್ರ ನಂತರ 24 ರನ್‌ ಗಳಿಸುವಷ್ಟರಲ್ಲಿ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ವಿಕೆಟ್ ಕೂಡ ಕಳೆದುಕೊಂಡಿತು. ಜ್ಯೋತಿ ಸಾಯಿ ಕೃಷ್ಣ ಮತ್ತು ರಿಕಿ ಭುಯಿ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ಈ ಜೋಡಿಗೆ 17 ರನ್‌ ಸೇರಿಸಲಷ್ಟೇ ಸಾಧ್ಯವಾಯಿತು.

ADVERTISEMENT

ಜ್ಯೋತಿ ಸಾಯಿ ಔಟಾದ ನಂತರ ರಿಕಿ ಜೊತೆಗೂಡಿದ ಕರಣ್ ಶಿಂಧೆ 36 ರನ್‌ ಸೇರಿಸಿದರು. ಇವರಿಬ್ಬರ ಜೊತೆಯಾಟವೂ ಮುರಿದು ಬಿದ್ದ ನಂತರ ಆಂಧ್ರ ಇನಿಂಗ್ಸ್‌ ಮತ್ತೆ ಪತನದತ್ತ ಸಾಗಿತು. ದಿನದಾಟ ಮುಕ್ತಾಯದ ವೇಳೆಶೋಯೆಬ್‌ ಮೊಹಮ್ಮದ್ ಖಾನ್ ಭರವಸೆಯಾಗಿ ಉಳಿದಿದ್ದಾರೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 313; ಛತ್ತೀಸಗಡ ಕ್ರಿಕೆಟ್ ಸಂಘ: 43 ಓವರ್‌ಗಳಲ್ಲಿ 147 (ಕೆ.ವಿ.ಶಶಿಕಾಂತ್ 39ಕ್ಕೆ4, ಸಿ.ಎಚ್‌.ಸ್ಟೀಫನ್ 52ಕ್ಕೆ3, ಗಿರಿನಾಥ್‌ ರೆಡ್ಡಿ 40ಕ್ಕೆ2); ಎರಡನೇ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 48 ಓವರ್‌ಗಳಲ್ಲಿ 7ಕ್ಕೆ 139 (ರಿಕಿ ಭುಯಿ 24, ಕರಣ್ ಶಿಂಧೆ 22, ಶೋಯೆಬ್‌ ಮೊಹಮ್ಮದ್ ಖಾನ್ ಔಟಾಗದೆ 20, ಜಿ.ಮನೀಷ್‌ 14, ಸ್ವರೂಪ್‌ ಕುಮಾರ್‌ ಔಟಾಗದೆ 14; ಪಂಕಜ್ ರಾವ್‌ 28ಕ್ಕೆ1, ಪುನೀತ್ ದಾತೆ 19ಕ್ಕೆ3, ವೀರ ಪ್ರತಾಪ ಸಿಂಗ್‌ 39ಕ್ಕೆ1, ಶಶಾಂಕ್‌ 22ಕ್ಕೆ1, ಅಜಯ್ ಮಂಡಲ್ 15ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.