ADVERTISEMENT

ನಿಯಮ ಉಲ್ಲಂಘನೆ: ಜೋಫ್ರಾಗೆ ಕೊಕ್‌

ರಾಯಿಟರ್ಸ್
Published 16 ಜುಲೈ 2020, 9:14 IST
Last Updated 16 ಜುಲೈ 2020, 9:14 IST
ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್   

ಮ್ಯಾಂಚೆಸ್ಟರ್: ಜೀವ ಸುರಕ್ಷಾ (ಬಯೊ ಸೆಕ್ಯುರ್‌) ವಾತಾವರಣ ನಿಯಮ ಉಲ್ಲಂಘಿಸಿರುವ ಕಾರಣ ಇಂಗ್ಲೆಂಡ್‌ ತಂಡದ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಅವರನ್ನು ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌‍ಪಂದ್ಯದಿಂದ ಕೈಬಿಡಲಾಗಿದೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಗುರುವಾರ ಈ ತೀರ್ಮಾನ ಕೈಗೊಂಡಿದೆ.

‘ಆರ್ಚರ್‌ ಅವರು ಐದು ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಈ ಅವಧಿಯಲ್ಲಿ ಎರಡು ಬಾರಿ ಕೋವಿಡ್‌ ಪರೀಕ್ಷೆ ಎದುರಿಸಲಿದ್ದಾರೆ. ಎರಡು ವರದಿಗಳ ಫಲಿತಾಂಶ ‘ನೆಗೆಟಿವ್‌’ ಬಂದರಷ್ಟೇ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗುತ್ತದೆ’ ಎಂದು ಇಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಆರ್ಚರ್‌ ಮಾಡಿರುವ ತಪ್ಪು ಏನು ಎಂಬುದನ್ನು ಇಸಿಬಿ ಸ್ಪಷ್ಟವಾಗಿ ತಿಳಿಸಿಲ್ಲ.

‘ನನ್ನಿಂದ ದೊಡ್ಡ ಪ್ರಮಾದವಾಗಿದೆ. ಸಹ ಆಟಗಾರರು ಹಾಗೂ ತಂಡದ ಆಡಳಿತ ಮಂಡಳಿಯನ್ನು ಅಪಾಯಕ್ಕೆ ಸಿಲುಕಿಸುವಂತ ಕೆಲಸ ಮಾಡಿದ್ದೇನೆ. ಈ ತಪ್ಪಿಗಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಜೋಫ್ರಾ ಹೇಳಿದ್ದಾರೆ.

‘ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿರುವುದಕ್ಕೆ ತೀವ್ರ ಬೇಸರವಾಗುತ್ತಿದೆ. ನಾನು ಎರಡೂ ತಂಡದವರನ್ನು ಅಪಾಯ‌ಕ್ಕೆ ದೂಡುವ ಕೆಲಸ ಮಾಡಿಬಿಟ್ಟೆ. ಇದಕ್ಕಾಗಿ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.

25 ವರ್ಷ ವಯಸ್ಸಿನ ಜೋಫ್ರಾ, ಸೌತಾಂಪ್ಟನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ವಿಕೆಟ್‌ ಉರುಳಿಸಲು ವಿಫಲರಾಗಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ 17 ಓವರ್‌ ಬೌಲ್‌ ಮಾಡಿದ್ದ ಅವರು 45ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದರು. ಈ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್‌ ತಂಡವು 4 ವಿಕೆಟ್‌ಗಳಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.