ADVERTISEMENT

ಆ್ಯಷಸ್ ಟೆಸ್ಟ್ ಸರಣಿ: ’ಸಮಬಲ‘ ಹೋರಾಟಕ್ಕೆ ಇಂಗ್ಲೆಂಡ್ ಛಲ

ಆ್ಯಷಸ್ ಟೆಸ್ಟ್ ಸರಣಿ ಕೈವಶಕ್ಕೆ ಆಸ್ಟ್ರೇಲಿಯಾ ಛಲ; ಮ್ಯಾಂಚೆಸ್ಟರ್‌ನಲ್ಲಿ ಇಂದಿನಿಂದ ನಾಲ್ಕನೇ ಪಂದ್ಯ

ಎಎಫ್‌ಪಿ
Published 18 ಜುಲೈ 2023, 14:18 IST
Last Updated 18 ಜುಲೈ 2023, 14:18 IST
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್  –ಎಎಫ್‌ಪಿ ಚಿತ್ರ
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್  –ಎಎಫ್‌ಪಿ ಚಿತ್ರ   

ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡವು ಈ ಬಾರಿ ತವರಿನಂಗಳದಲ್ಲಿ ಆ್ಯಷಸ್ ಟ್ರೋಫಿ ಜಯಿಸುವ ಕನಸು ಜೀವಂತವಾಗಿಟ್ಟುಕೊಳ್ಳಬೇಕಾದರೆ ಬುಧವಾರ ಆರಂಭವಾಗುವ ಟೆಸ್ಟ್‌ನಲ್ಲಿ ಜಯಿಸಲೇಬೇಕಾದ ಒತ್ತಡದಲ್ಲಿದೆ.

ಎಮಿರೆಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆ್ಯಷಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಡೆಯಲಿದೆ. ಪ್ರವಾಸಿ ಆಸ್ಟ್ರೇಲಿಯಾ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2–1ರಿಂದ ಮುಂದಿದೆ. ಪ್ಯಾಟ್ ಕಮಿನ್ಸ್‌ ನಾಯಕತ್ವದ ಬಳಗವು ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್‌ ಬಳಗವು ತಿರುಗೇಟು ನೀಡಿತ್ತು. ಅದರಿಂದಾಗಿ 3–0ಯಿಂದ ಸರಣಿ ಕೈವಶ ಮಾಡಿಕೊಳ್ಳುವ ಆಸ್ಟ್ರೇಲಿಯಾದ ಕನಸು ಈಡೇರಲಿಲ್ಲ.

ಈ ಬಾರಿ ಸರಣಿಯ ಮೂರು ಪಂದ್ಯಗಳಲ್ಲಿಯೂ ರೋಚಕ ಫಲಿತಾಂಶಗಳು ಹೊರಹೊಮ್ಮಿವೆ. ಉಭಯ ತಂಡಗಳ ಹೋರಾಟ ಟೆಸ್ಟ್‌ ಕ್ರಿಕೆಟ್‌ನ ಸೊಬಗನ್ನು ಹೆಚ್ಚಿಸಿದೆ.

ADVERTISEMENT

ಇದೀಗ ಇಂಗ್ಲೆಂಡ್ ತಂಡಕ್ಕೆ ಅನುಭವಿ ವೇಗಿ ಜಿಮ್ಮಿ ಆ್ಯಂಡರ್ಸನ್ ಕೂಡ ಮರಳಿದ್ದಾರೆ. ಅದರಿಂದಾಗಿ ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್ ಹಾಗೂ ಕ್ರಿಸ್ ವೋಕ್ಸ್‌ ಅವರೊಂದಿಗೆ ಜಿಮ್ಮಿ ಕೂಡ ಎದುರಾಳಿ ತಂಡಕ್ಕೆ ’ಸ್ವಿಂಗ್ ಸವಾಲು‘ ಒಡ್ಡಲು ಸಿದ್ಧರಾಗಿದ್ದಾರೆ.

ಬೆನ್ ಸ್ಟೋಕ್ಸ್‌, ಜೋ ರೂಟ್, ಹ್ಯಾರಿ ಬ್ರೂಕ್ ಅವರು ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಬ್ಯಾಟಿಂಗ್ ವಿಭಾಗದ ಹೊಣೆಯೂ ಅವರ ಮೇಲೆ ಹೆಚ್ಚು ಬೀಳಲಿದೆ.

ಅದೇ ಆಸ್ಟ್ರೇಲಿಯಾ ತಂಡದಲ್ಲಿ ಬ್ಯಾಟಿಂಗ್ ಪಡೆ ಉತ್ತಮವಾಗಿದೆ. ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಮತ್ತು ಮಾರ್ನಸ್ ಲಾಬುಷೇನ್ ಅವರು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ.  ಆರಂಭಿಕ ಉಸ್ಮಾನ್ ಖ್ವಾಜಾ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ಅಸ್ಥಿರವಾಗಿರುವುದರಿಂದ ತಂಡಕ್ಕೆ ಉತ್ತಮ ಆರಂಭ ಚಿಂತೆ ಕಾಡುತ್ತಿದೆ.

ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಸ್ಪಿನ್ನರ್ ನೇಥನ್ ಲಯನ್ ತಂಡದ ಬೌಲಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ಪಂದ್ಯವನ್ನು ಜಯಿಸಿಕೊಡಬಲ್ಲ ಸಮರ್ಥರೂ ಹೌದು. ಈ ಪಂದ್ಯವನ್ನು ಜಯಿಸಿದರೆ ಆಸ್ಟ್ರೇಲಿಯಾಕ್ಕೆ ಸರಣಿ ಕೈವಶವಾಗುತ್ತದೆ. ಆದರೆ,  ಇಂಗ್ಲೆಂಡ್ ಕಳೆದ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು ಇಲ್ಲಿಯೂ ಕಠಿಣ ಸವಾಲೊಡ್ಡುವ ನಿರೀಕ್ಷೆ ಇದೆ. ಅದರಿಂದಾಗಿ ಮತ್ತೊಂದು ರೋಚಕ ಹಣಾಹಣಿ ನಡೆಯುವ ಸಾಧ್ಯತೆ ಇದೆ.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ಟೆನ್, ಟೆನ್ 5 ಎಚ್‌ಡಿ

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್   –ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.