ADVERTISEMENT

ಯುಎಇಯಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ 2025: ಸೆ.14ರಂದು ಭಾರತ–ಪಾಕ್ ಮುಖಾಮುಖಿ

ಬದ್ಧ ಎದುರಾಳಿಗಳ ಎಡು ಹಣಾಹಣಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 16:00 IST
Last Updated 26 ಜುಲೈ 2025, 16:00 IST
   

ಕರಾಚಿ/ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 9 ರಿಂದ 28ರವರೆಗೆ ಪುರುಷರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆ. 14ರಂದು ಮುಖಾಮುಖಿಯಾಗಲಿವೆ.

ಲೀಗ್ ಹಂತದಲ್ಲಿ ಉಭಯ ತಂಡಗಳು ಒಂದೇ ಗುಂಪಿನಲ್ಲಿ ಆಡಲಿವೆ. ಸೂಪರ್ ಫೋರ್ ಹಂತದಲ್ಲಿ ಭಾರತ ಮತ್ತು ಪಾಕ್ ತಂಡಗಳು ಸೆ. 21ರಂದು (ಭಾನುವಾರ) ಮತ್ತೆ ಹಣಾಹಣಿ ನಡೆಸುವ ನಿರೀಕ್ಷೆ ಇದೆ. ಈ ಟೂರ್ನಿಯಲ್ಲಿ ಭಾರತವು ತನ್ನ ಮೊದಲ ಪಂದ್ಯವನ್ನು ಸೆ 10ರಂದು ಯುಎಇ ಎದುರು ಆಡಲಿದೆ. ಭಾರತ ತಂಡವು ತನ್ನ ಎಲ್ಲ ಪಂದ್ಯಗಳನ್ನೂ ದುಬೈನಲ್ಲಿ ಆಡಲಿದೆ.

ಎ ಗುಂಪಿನಲ್ಲಿ; ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮನ್, ಬಿ ಗುಂಪಿನಲ್ಲಿ; ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಹಾಂಗ್‌ಕಾಂಗ್ ತಂಡಗಳು ಆಡಲಿವೆ. 

ADVERTISEMENT

‘ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ದಿನಾಂಕಗಳನ್ನು ಪ್ರಕಟಿಸಲು ನನಗೆ ಅತೀವ ಸಂತಸವಾಗಿದೆ. ಈ ಪ್ರತಿಷ್ಠಿತ ಟೂರ್ನಿಯು ಸೆ 9ರಿಂದ 28ರವರೆಗೆ ನಡೆಯಲಿದೆ. ಸೊಗಸಾದ ಕ್ರಿಕೆಟ್ ಟೂರ್ನಿ ಇದಾಗಲಿದೆ’ ಎಂದು  ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹಸಿನ್ ನಖ್ವಿ ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರೆ.

ಟೂರ್ನಿಯಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿವೆ. ದುಬೈ ಮತ್ತು ಅಬುಧಾಬಿಯಲ್ಲಿ ಕೆಲವು ಪಂದ್ಯಗಳು ಆಯೋಜನೆಗೊಳ್ಳಲಿವೆ.

ಜುಲೈ 24ರಮದು ನಡೆದಿದ್ದ ಎಸಿಸಿ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. 25 ಸಹ ಸದಸ್ಯ ರಾಷ್ಟ್ರಗಳ ತಂಡಗಳು ಸಭೆಯಲ್ಲಿ ಭಾಗವಹಿಸಿದ್ದವು. ಈ ಟೂರ್ನಿಯ ಆತಿಥ್ಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಹಿಸಲಿದೆ. ಆದರೆ ತಟಸ್ಥ ಸ್ಥಳವಾದ ಯುಎಇಯಲ್ಲಿ ಟೂರ್ನಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.