ADVERTISEMENT

Asia Cup: ಭಾರತ–ಪಾಕಿಸ್ತಾನ ನಡುವಿನ ಸೂಪರ್–4 ಪಂದ್ಯಕ್ಕೆ ಮೀಸಲು ದಿನ ನಿಗದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಸೆಪ್ಟೆಂಬರ್ 2023, 10:09 IST
Last Updated 8 ಸೆಪ್ಟೆಂಬರ್ 2023, 10:09 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ಕೊಲಂಬೊ: ಶ್ರೀಲಂಕಾದ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದೇ 10ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್–4 ಹಂತದ ಪಂದ್ಯಕ್ಕೆ ಮೀಸಲು ದಿನವನ್ನು ಏಷ್ಯನ್ ಕ್ರಿಕೆಟ್ ಮಂಡಳಿ(ಎಸಿಸಿ) ನಿಗದಿ ಮಾಡಿದೆ.

ಎಸಿಸಿ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ಪಂದ್ಯವು ಪ್ರತಿಕೂಲ ಹವಾಮಾನದಿಂದ ಅಮಾನತುಗೊಂಡರೆ, ಅಮಾನತುಗೊಳಿಸಿದ ಹಂತದಿಂದ ಸೆಪ್ಟೆಂಬರ್ 11ರಂದು ಪಂದ್ಯವು ಮುಂದುವರಿಯುತ್ತದೆ.

ADVERTISEMENT

ಅಂತಹ ಸಂದರ್ಭದಲ್ಲಿ, ಪ್ರೇಕ್ಷಕರು ಪಂದ್ಯದ ಟಿಕೆಟ್‌ಗಳನ್ನು ಹಾಗೇ ಇಟ್ಟುಕೊಂಡು ಮೀಸಲು ದಿನದಂದು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಬಹುದು ಎಂದು ಎಸಿಸಿ ತಿಳಿಸಿದೆ.

ಇದಕ್ಕೂ ಮೊದಲು, ಏಷ್ಯಾಕಪ್ ಫೈನಲ್‌ಗೆ ಮಾತ್ರ ಮೀಸಲು ದಿನ ಇತ್ತು, ಈ ಬಾರಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮೀಸಲು ದಿನ ನಿಗದಿ ಮಾಡಲಾಗಿದೆ. ಲೀಗ್ ಹಂತದ ಭಾರತ–ಪಾಕಿಸ್ತಾನ ನಡುವಿನ ಪಂದ್ಯ ಮಳೆಯಲ್ಲಿ ಕೊಚ್ಚಿಹೋಗಿತ್ತು. ಭಾರತ ಬ್ಯಾಟಿಂಗ್ ಮುಗಿಸುತ್ತಿದ್ದಂತೆ ಮಳೆ ಬಂದಿತ್ತು. ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದು ಮಾಡಲಾಗಿತ್ತು. ಆ ಪಂದ್ಯದಲ್ಲಿ ಭಾರತ ತಂಡ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಆಲೌಟ್ ಆಗಿತ್ತು.

ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದ್ದು, ಶೇಕಡ 90ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.