ಕಾಬೂಲ್: ಸೆಪ್ಟೆಂಬರ್ 9 ರಿಂದ ‘ಯುಎಇ‘ನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿಗೆ ಅಫ್ಗಾನಿಸ್ತಾನ ತಂಡ ಪ್ರಕಟಿಸಿದೆ. ಅನುಭವಿ ಆಟಗಾರ ರಶೀದ್ ಖಾನ್ ನಾಯಕತ್ವ ವಹಿಸಿಕೊಂಡಿದ್ದಾರೆ.
ಏಷ್ಯಾ ಕಪ್‌ಗೂ ಮೊದಲು ಪಾಕಿಸ್ತಾನ ಮತ್ತು ಯುಎಇ ನಡುವಿನ ಟಿ–20 ತ್ರಿಕೋನ ಸರಣಿಯಲ್ಲಿ ಕೂಡ ಇದೇ ತಂಡವು ಕಣಕ್ಕಿಳಿಯಲಿದೆ.
ಏಷ್ಯಾ ಕಪ್ ಟೂರ್ನಿಗೆ ಬಲಾಢ್ಯ ಸ್ಪಿನ್ ಬೌಲಿಂಗ್ ಪಡೆಯನ್ನು ಅಫ್ಗಾನಿಸ್ತಾನ ಪ್ರಕಟಿಸಿದೆ. ತಂಡದಲ್ಲಿ ನಾಯಕ ರಶೀದ್ ಖಾನ್ ಸೇರಿದಂತೆ ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದಾರೆ.
ಅನುಭವಿ ಬೌಲರ್‌ಗಳಾದ ಫಜಲ್ ಹಕ್ ಫಾರೂಕಿ, ನವೀನ್-ಉಲ್-ಹಕ್, ಅಜ್ಮತುಲ್ಲಾ ಒಮರ್‌ಜೈ ಮತ್ತು ಗುಲ್ಬದಿನ್ ನೈಬ್ ಅವರು ವೇಗದ ಬೌಲಿಂಗ್‌ಗೆ ಬಲ ತುಂಬುವ ವಿಶ್ವಾಸದಲ್ಲಿದ್ದಾರೆ.
ದೇಶಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ 19 ವರ್ಷದ ಆಟಗಾರ ಘಜನ್ಫರ್ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಘಜನ್ಫರ್ ಅವರು ಅಫ್ಗಾನಿಸ್ತಾನ ಪರ ಏಕದಿನ ಪಂದ್ಯಗಳನ್ನು ಆಡಿದ್ದು, ಅಂತರರಾಷ್ಟ್ರೀಯ ಟಿ–20 ಗೆ ಪದಾರ್ಪಣೆ ಮಾಡಿಲ್ಲ.
ಏಷ್ಯಾ ಕಪ್‌ನಲ್ಲಿ ಅಫ್ಗಾನಿಸ್ತಾನ ತಂಡವು ಬಿ ಗುಂಪಿನಲ್ಲಿದೆ. ಬಾಂಗ್ಲಾದೇಶ, ಹಾಂಕಾಂಗ್ ಹಾಗೂ ಶ್ರೀಲಂಕಾ ವಿರುದ್ದ ಸ್ಪರ್ಧಿಸಲಿದೆ.
ಅಫ್ಗಾನಿಸ್ತಾನ ತಂಡವು 2024ರ ಟಿ–20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಗಮನಸೆಳೆದಿತ್ತು. 2025ರಲ್ಲಿ ಒಂದು ಟಿ–20 ಪಂದ್ಯವನ್ನು ಕೂಡ ಆಡಿರದ ಅಫ್ಗಾನಿಸ್ತಾನ, ಏಷ್ಯಾ ಕಪ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದೆ.
ಅಫ್ಗಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ, ಅಜ್ಮತುಲ್ಲಾ ಒಮರ್‌ಜೈ, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಇಶಾಕ್, ಘಜನ್ಫರ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ನವೀನ್-ಉಲ್-ಹಕ್, ಫಜಲ್ ಹಕ್ ಫಾರೂಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.