ADVERTISEMENT

ಏಷ್ಯಾ ಕಪ್ ಟ್ರೋಫಿ ವಿವಾದ: ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸಲು ಬಿಸಿಸಿಐ ಸಿದ್ಧತೆ

ಪಿಟಿಐ
Published 31 ಅಕ್ಟೋಬರ್ 2025, 16:10 IST
Last Updated 31 ಅಕ್ಟೋಬರ್ 2025, 16:10 IST
ದೇವಜಿತ್ ಸೈಕಿಯಾ
ದೇವಜಿತ್ ಸೈಕಿಯಾ   

ಮುಂಬೈ: ಭಾರತದ ಪುರುಷರ ಕ್ರಿಕೆಟ್‌ ತಂಡ ಗೆದ್ದಿರುವ ಏಷ್ಯಾ ಕಪ್ ಟ್ರೋಫಿಯು ಒಂದು ಅಥವಾ ಎರಡು ದಿನಗಳಲ್ಲಿ ಮುಂಬೈನಲ್ಲಿರುವ ತನ್ನ ಪ್ರಧಾನ ಕಚೇರಿಗೆ ತಲುಪುವ ನಿರೀಕ್ಷೆಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಂದಿದೆ.

ಒಂದು ವೇಳೆ ಬಿಕ್ಕಟ್ಟು ಮುಂದುವರಿದರೆ ಅದನ್ನು ಇದೇ 4ರಂದು ನಡೆಯುವ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಭೆಯಲ್ಲಿ ಪ್ರಸ್ತಾಪಿಸಲೂ ಬಿಸಿಸಿಐ ಸಿದ್ಧತೆ ನಡೆಸಿದೆ. 

ದುಬೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಏಷ್ಯಾ ಕಪ್ ಗೆದ್ದಿತ್ತು. ಆದರೆ, ಪಾಕಿಸ್ತಾನ ಸರ್ಕಾರದಲ್ಲಿ ಸಚಿವ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಕ್ವಿ ಅವರಿಂದ ಟ್ರೋಫಿ ಪಡೆಯಲು ಭಾರತ ನಿರಾಕರಿಸಿತ್ತು. ಎಸಿಸಿ ಅಧ್ಯಕ್ಷರಾಗಿ ಟ್ರೋಫಿ ಪ್ರದಾನ ಮಾಡುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ ನಕ್ವಿ ಟ್ರೋಫಿಯೊಡನೆ ಹೊರಟಿದ್ದರು. 

ADVERTISEMENT

‘ಫೈನಲ್‌ ನಡೆದು ಒಂದು ತಿಂಗಳಾದರೂ ನಮಗೆ ಟ್ರೋಫಿ ನೀಡದಿರುವ ಬಗ್ಗೆ ಅಸಮಾಧಾನವಿದೆ. 10 ದಿನಗಳ ಹಿಂದೆ ನಾವು ಎಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ. ಆದರೆ, ಅವರ ನಿಲುವಿನಲ್ಲಿ ಕಿಂಚಿತ್‌ ಬದಲಾವಣೆಯಾಗಿಲ್ಲ. ಟ್ರೋಫಿಯನ್ನು ಒಂದೆರಡು ದಿನದಲ್ಲಿ ಹಸ್ತಾಂತರಿಸದಿದ್ದರೆ, ದುಬೈನಲ್ಲಿ ಮಂಗಳವಾರ ನಡೆಯಲಿರುವ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇವೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.