ADVERTISEMENT

ಸ್ಟಾರ್ಕ್‌ ಮಿಂಚಿನ ದಾಳಿಗೆ ಶ್ರೀಲಂಕಾ ದೂಳೀಪಟ

ಏಜೆನ್ಸೀಸ್
Published 4 ಫೆಬ್ರುವರಿ 2019, 16:58 IST
Last Updated 4 ಫೆಬ್ರುವರಿ 2019, 16:58 IST
ಮಿಶೆಲ್ ಸ್ಟಾರ್ಕ್‌ –ಎಫ್‌ಪಿ ಚಿತ್ರ
ಮಿಶೆಲ್ ಸ್ಟಾರ್ಕ್‌ –ಎಫ್‌ಪಿ ಚಿತ್ರ   

ಕ್ಯಾನ್‌ಬೆರಾ: ಐದು ವಿಕೆಟ್ ಉರುಳಿಸಿದ ಮಧ್ಯಮ ವೇಗಿ ಮಿಶೆಲ್ ಸ್ಟಾರ್ಕ್‌ ಅವರ ಅಮೋಘ ಬೌಲಿಂಗ್ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಗಳಿಸಿತು.

ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 40 ರನ್‌ಗಳಿಂದ ಗೆದ್ದಿದ್ದ ಆಸ್ಟ್ರೇಲಿಯಾ ಸೋಮವಾರ ಮುಕ್ತಾಯಗೊಂಡ ಎರಡನೇ ಮತ್ತು ಅಂತಿಮ ಪಂದ್ಯದಲ್ಲಿ 366 ರನ್‌ಗಳಿಂದ ಎದುರಾಳಿಗಳನ್ನು ಮಣಿಸಿತು.

516 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ ಮೂರನೇ ದಿನವಾದ ಭಾನುವಾರ ವಿಕೆಟ್ ಕಳೆದುಕೊಳ್ಳದೆ 17 ರನ್ ಗಳಿಸಿತ್ತು. ಸೋಮವಾರ ಭಾರಿ ಸಂಖ್ಯೆಯಲ್ಲಿ ಸೇರಿದ್ದ ತವರಿನ ಪ್ರೇಕಕ್ಷರ ಮುಂದೆ ಸ್ಟಾರ್ಕ್‌ ಬಿರುಗಾಳಿಯಾದರು. 46ಕ್ಕೆ 5 ವಿಕೆಟ್‌ ಉರುಳಿಸಿದ ಅವರ ಮುಂದೆ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ನಿರುತ್ತರರಾದರು. ಮೊದಲ ಇನಿಂಗ್ಸ್‌ನಲ್ಲೂ ಸ್ಟಾರ್ಕ್‌ ಐದು ವಿಕೆಟ್ ಗಳಿಸಿದ್ದರು.

ADVERTISEMENT

ಆರಂಭಿಕ ಬ್ಯಾಟ್ಸ್‌ಮನ್ ಲಾಹಿರು ತಿರಿಮನ್ನೆ 30 ರನ್ ಗಳಿಸಿದರೆ ಮಧ್ಯಮ ಕ್ರಮಾಂಕದ ಕುಶಾಲ್ ಮೆಂಡಿಸ್ 42 ರನ್‌ ಗಳಿಸಿದರು. ಏಳು ಮಂದಿ ಎರಡಂಕಿ ಮೊತ್ತ ದಾಟಲು ವಿಫಲರಾದರು. ಇವರ ಪೈಕಿ ಇಬ್ಬರು ಶೂನ್ಯಕ್ಕೆ ಔಟಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ:534, ಶ್ರೀಲಂಕಾ:215; ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 3ಕ್ಕೆ 196 ಡಿಕ್ಲೇರ್ಡ್‌, ಶ್ರೀಲಂಕಾ: 51 ಓವರ್‌ಗಳಲ್ಲಿ 149 (ಲಾಹಿರು ತಿರಿಮನ್ನೆ 30, ನಿರೋಷನ್ ಡಿಕ್ವೆಲ್ಲಾ 27, ಕುಶಾಲ್ ಮೆಂಡಿಸ್‌ 42, ಕರುಣರತ್ನೆ 22; ಮಿಶೆಲ್ ಸ್ಟಾರ್ಕ್‌ 46ಕ್ಕೆ5, ಪ್ಯಾಟ್‌ ಕಮಿನ್ಸ್‌ 15ಕ್ಕೆ3). ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 366 ರನ್‌ಗಳ ಜಯ; ಸರಣಿಯಲ್ಲಿ 2–0 ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.