ADVERTISEMENT

West Indies vs Bangladesh | ದ್ವಿತೀಯ ಟೆಸ್ಟ್‌: ಬಾಂಗ್ಲಾಕ್ಕೆ ಜಯ

ವೆಸ್ಟ್ ಇಂಡೀಸ್ ಜೊತೆ ಸರಣಿ 1–1 ಸಮಬಲ

ಏಜೆನ್ಸೀಸ್
Published 4 ಡಿಸೆಂಬರ್ 2024, 12:59 IST
Last Updated 4 ಡಿಸೆಂಬರ್ 2024, 12:59 IST
   

ಕಿಂಗ್‌ಸ್ಟನ್‌ (ಜಮೈಕಾ): ಬಾಂಗ್ಲಾದೇಶ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮಂಗಳವಾರ ವೆಸ್ಟ್‌ ಇಂಡೀಸ್ ತಂಡವನ್ನು 101 ರನ್‌ಗಳಿಂದ ಸೋಲಿಸಿತು. ಆ ಮೂಲಕ 15 ವರ್ಷಗಳಲ್ಲಿ ಮೊದಲ ಬಾರಿ ಕೆರಿಬಿಯನ್ ನೆಲದಲ್ಲಿ ಟೆಸ್ಟ್‌ ಪಂದ್ಯವನ್ನು ಜಯಿಸಿದ ಗೌರವಕ್ಕೆ ಪಾತ್ರವಾಯಿತು.

ಈ ಮೂಲಕ ಎರಡು ಟೆಸ್ಟ್‌ಗಳ ಸರಣಿ 1–1 ಸಮಬಲದಲ್ಲಿ ಮುಗಿಯಿತು. ಗೆಲುವಿಗೆ 287 ರನ್‌ಗಳ ಗುರಿ ಎದುರಿಸಿದ್ದ ವೆಸ್ಟ್‌ ಇಂಡೀಸ್ ತಂಡ, ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ದಾಳಿಗೆ ಸಿಲುಕಿ 50 ಓವರುಗಳಲ್ಲಿ 185 ರನ್‌ಗಳಿಗೆ ಆಲೌಟ್‌ ಆಯಿತು. ತೈಜುಲ್ (50ಕ್ಕೆ5) ಐದು ವಿಕೆಟ್‌ಗಳ ಗೊಂಚಲು ಪಡೆದರು. ಆತಿಥೇಯರ ಕೊನೆಯ ಆರು ವಿಕೆಟ್‌ಗಳು 42 ರನ್ನಿಗೆ ಉರುಳಿದವು. ಆರಂಭ ಆಟಗಾರ ಕ್ರೆಗ್‌ ಬ್ರಾತ್‌ವೇಟ್‌ (43) ಮತ್ತು ಕವೆಮ್‌ ಹಾಜ್ (55) ಬಿಟ್ಟರೆ ಉಳಿದವರು ಪ್ರತಿರೋಧ ತೋರಲಿಲ್ಲ.

ಇದಕ್ಕೆ ಮೊದಲು ಮೂರನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 193 ರನ್ ಗಳಿಸಿದ್ದ ಬಾಂಗ್ಲಾದೇಶ ಎರಡನೇ ಇನಿಂಗ್ಸ್‌ನಲ್ಲಿ 268 ರನ್‌ ಗಳಿಸಿ ಸವಾಲಿನ ಗುರಿ ನಿಗದಿಪಡಿಸಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಜೇಕರ್ ಅಲಿ (91, 106ಎ) ಅವರ ಆಟ ಪ್ರವಾಸಿ ತಂಡದ ಮೊತ್ತ ಬೆಳೆಯಲು ಕಾರಣವಾಯಿತು.

ADVERTISEMENT

ಕಳೆದ ವಾರ ಆ್ಯಂಟಿಗಾದಲ್ಲಿ ನಡೆದ ಮೊದಲ ಟೆಸ್ಟ್‌ ಸೇರಿದಂತೆ ಬಾಂಗ್ಲಾದೇಶ ತಂಡವು, ಕೆರಿಬಿಯನ್‌ ನೆಲದಲ್ಲಿ ಆಡಿದ ಏಳು ಟೆಸ್ಟ್‌ಗಳಲ್ಲಿ ಸೋಲನುಭವಿಸಿತ್ತು.

ಸ್ಕೋರುಗಳು:

ಮೊದಲ ಇನಿಂಗ್ಸ್: ಬಾಂಗ್ಲಾದೇಶ: 164; ವೆಸ್ಟ್‌ ಇಂಡೀಸ್‌: 146; ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 268 (ಜೇಕರ್ ಅಲಿ 91; ಅಲ್ಜಾರಿ ಜೋಸೆಫ್‌ 77ಕ್ಕೆ3, ಕೇಮಾರ್ ರೋಚ್‌ 36ಕ್ಕೆ3); ವೆಸ್ಟ್‌ ಇಂಡೀಸ್‌: 50 ಓವರುಗಳಲ್ಲಿ 185 (ಬ್ರಾತ್‌ವೇಟ್‌ 43, ಕವೆಮ್ ಹಾಜ್ 55; ತೈಜುಲ್ ಇಸ್ಲಾಂ 50ಕ್ಕೆ5, ಹಸನ್‌ ಮೆಹಮೂದ್ 20ಕ್ಕೆ2, ತಸ್ಕಿನ್ ಅಹ್ಮದ್ 45ಕ್ಕೆ2). ಪಂದ್ಯದ ಆಟಗಾರ: ತೈಜುಲ್ ಇಸ್ಲಾಂ; ಸರಣಿಯ ಆಟಗಾರ: ತಸ್ಕಿನ್ ಅಹ್ಮದ್ ಮತ್ತು ಜೇಡನ್ ಸೀಲ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.