ಗಾಲೆ (ಶ್ರೀಲಂಕಾ): ಬಾಂಗ್ಲಾದೇಶ ತಂಡ, ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೆ ದಿನವಾದ ಬುಧವಾರವೂ ಶ್ರೀಲಂಕಾ ವಿರುದ್ಧ ಮೇಲುಗೈ ಸಾಧಿಸಿತು. ದಿನದ ಕೊನೆಯ ಅವಧಿಯಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡರೂ 9 ವಿಕೆಟ್‌ಗೆ 484 ರನ್‌ಗಳ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.
3 ವಿಕೆಟ್‌ಗೆ 292 ರನ್‌ಗಳೊಡನೆ ಎರಡನೇ ದಿನದಾಟ ಮುಂದುವರಿಸಿದ ಬಾಂಗ್ಲಾ ತಂಡ ಬ್ಯಾಟಿಂಗ್ ಪಿಚ್‌ನ ಲಾಭ ಪಡೆದು ಮೊತ್ತ ಬೆಳೆಸಿತು. ಮುಷ್ಫಿಕುರ್ ರಹೀಮ್ (163, 350ಎ, 4x9) ಮತ್ತು ನಜ್ಮುಲ್ ಹುಸೇನ್ ಶಾಂತೊ (148, 279ಎ, 4x15, 6x1) ಅವರ ನಡುವಣ ನಾಲ್ಕನೇ ವಿಕೆಟ್ ಜೊತೆಯಾಟ 264 ರನ್‌ಗಳಿಗೆ ಬೆಳೆಯಿತು.
ನಾಯಕ ಶಾಂತೊ 150 ರನ್‌ಗಳ ಮೈಲಿಗಲ್ಲು ಸಮೀಪಿಸುತ್ತಿದ್ದಾಗ ನಿರ್ಗಮಿಸಿದರು. ಅಸಿತ ಫೆರ್ನಾಂಡೊ ಬೌಲಿಂಗ್‌ನಲ್ಲಿ ಮಿಡ್‌ಆಫ್‌ನಲ್ಲಿ ಕ್ಯಾಚಿತ್ತರು.
ಮುಷ್ಫಿಕುರ್ ಜೊತೆ ಸೇರಿಕೊಂಡ ವಿಕೆಟ್ ಕೀಪರ್ ಲಿಟ್ಟನ್ ದಾಸ್ ಬಿರುಸಿನ 90 ರನ್ (123ಎ) ಗಳಿಸಿದರು. ಇವರಿಬ್ಬರ ಜೊತೆಯಾಟದಲ್ಲಿ 149 ರನ್ ಸೇರಿದವು. ಲಂಕಾದ ಕಳಪೆ ಫೀಲ್ಡಿಂಗ್ ಕೂಡ ಅವರಿಗೆ ನೆರವಾಯಿತು. 9 ಗಂಟೆ ಕಾಲ ಕ್ರೀಸಿನಲ್ಲಿ ಕಳೆದ ಮುಷ್ಫಿಕುರ್ ಅವರೂ ಅಸಿತ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಲಂಚ್ ನಂತರ ಮಳೆಯಿಂದ ಎರಡು ಬಾರಿ ಆಟಕ್ಕೆ ಅಡ್ಡಿಯಾಯಿತು. ಎರಡನೇ ದಿನ 61 ಓವರುಗಳ ಆಟವಷ್ಟೇ ನಡೆಯಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 151 ಓವರುಗಳಲ್ಲಿ 9 ವಿಕೆಟ್‌ಗೆ 484 (ಮುಷ್ಫಿಕುರ್ ರಹಿಮ್ 163, ನಜ್ಮುಲ್ ಹುಸೇನ್ ಶಾಂತೊ 148, ಲಿಟ್ಟನ್ ದಾಸ್ 90; ಅಸಿತ ಫೆರ್ನಾಂಡೊ 80ಕ್ಕೆ3, ಮಿಲನ್ ರತ್ನಾಯಕೆ 38ಕ್ಕೆ3, ತಿರಿಂದು ರತ್ನಾಯಕೆ 196ಕ್ಕೆ3); ಶ್ರೀಲಂಕಾ ವಿರುದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.