ADVERTISEMENT

ಇದು ಆರಂಭವಷ್ಟೇ ಭವಿಷ್ಯದಲ್ಲಿ ಸಾಲುಗಟ್ಟಲಿವೆ ಪ್ರಶಸ್ತಿಗಳು: ತೆಂಬಾ ಬವುಮಾ

ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ವಿಶ್ವಾಸ

ಏಜೆನ್ಸೀಸ್
Published 16 ಜೂನ್ 2025, 1:29 IST
Last Updated 16 ಜೂನ್ 2025, 1:29 IST
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಜಯಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ‘ಐಸಿಸಿ ಗದೆ’ಯೊಂದಿಗೆ ಲಾರ್ಡ್ಸ್‌ ಕ್ರೀಡಾಂಗಣದ ಪೆವಿಲಿಯನ್ ಹೆಬ್ಬಾಗಿಲಿನಲ್ಲಿ ಕಂಡಿದ್ದು ಹೀಗೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ ಈ ಚಿತ್ರವನ್ನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡು, ವಿಜೇತ ತಂಡವನ್ನು ಅಭಿನಂದಿಸಿದೆ
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಜಯಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ‘ಐಸಿಸಿ ಗದೆ’ಯೊಂದಿಗೆ ಲಾರ್ಡ್ಸ್‌ ಕ್ರೀಡಾಂಗಣದ ಪೆವಿಲಿಯನ್ ಹೆಬ್ಬಾಗಿಲಿನಲ್ಲಿ ಕಂಡಿದ್ದು ಹೀಗೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ ಈ ಚಿತ್ರವನ್ನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡು, ವಿಜೇತ ತಂಡವನ್ನು ಅಭಿನಂದಿಸಿದೆ    

ಲಂಡನ್: ದಕ್ಷಿಣ ಆಫ್ರಿಕಾ ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರಿಸಿದ ತೆಂಬಾ ಬವುಮಾ ಅವರಿಗೆ ಈಗ ವಿಶ್ವದ ಎಲ್ಲ ಕಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

27 ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಒಲಿದಿರುವ ಐಸಿಸಿ ಟ್ರೋಫಿ ಇದಾಗಿದೆ. ತಂಡದ ‘ಚೋಕರ್ಸ್’ ಹಣೆಪಟ್ಟಿಯೂ ಈಗ ಕಳಚಿಬಿದ್ದಿದೆ. ‘ರೈನ್‌ಬೋ ನೇಷನ್’ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ನಲ್ಲಿ ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ ಗೆದ್ದಿತು. ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡದ ಒತ್ತಡ ಹೆಚ್ಚಿಸಲು ಆಸ್ಟ್ರೇಲಿಯಾದ ಆಟಗಾರರು ತಮ್ಮ ಹಳೆಯ ಚಾಳಿಯಾದ ‘ನಿಂದನೆ’ ತಂತ್ರಗಳನ್ನು ಬಳಸಿದ್ದರು. ಆದರೂ ಎದೆಗುಂದದ ಏಡನ್ ಮರ್ಕರಂ ಮತ್ತು ತೆಂಬಾ ಬವುಮಾ ಅವರು ದಿಟ್ಟ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 

‘ಇದು ಆರಂಭವಷ್ಟೇ. ಇದರೊಂದಿಗೆ ತಂಡಕ್ಕೆ ಪ್ರಶಸ್ತಿ ಗೆಲುವುಗಳು ಸಾಲುಗಟ್ಟಲಿವೆ ಎಂಬ ವಿಶ್ವಾಸವಿದೆ. ನಾವು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಇಚ್ಛೆ ಹೊಂದಿದ್ದೇವೆ. ಹೆಚ್ಚೆಚ್ಚು ಗೆಲುವುಗಳ ಗುರಿಯೂ ಇದೆ. ಅದರಲ್ಲೂ ಬಲಿಷ್ಠ ಕ್ರಿಕೆಟ್ ತಂಡಗಳ ಎದುರು ಗೆಲ್ಲುವ ಛಲವಿದೆ’ ಎಂದು ಪಂದ್ಯದ ನಂತರ ತೆಂಬಾ ಅವರು ಸುದ್ದಿಗಾರರಿಗೆ ಹೇಳಿದರು. 

ADVERTISEMENT

ಸದ್ಯದ ವೇಳಾಪಟ್ಟಿಯ ಪ್ರಕಾರ 2025ರಲ್ಲಿ ದಕ್ಷಿಣ ಆಫ್ರಿಕಾ ತಂಡವು ತನ್ನ ತವರಿನಲ್ಲಿ ಒಂದೂ ಟೆಸ್ಟ್ ಪಂದ್ಯ ಆಡುತ್ತಿಲ್ಲ. 

‘ಕಳೆದ ಮೂರೂವರೆ ದಿನಗಳಲ್ಲಿ ನಾವು  ಅಂತಹ ಉತ್ಕೃಷ್ಟ ಗುಣಮಟ್ಟದ ಕ್ರಿಕೆಟ್ ಆಡಿರಲಿಲ್ಲ. ಆದರೆ, ಗೆಲುವಿನ ದಾರಿ ಹುಡುಕುವ ಛಲ ಮಾತ್ರ ಬಿಟ್ಟಿರಲಿಲ್ಲ. ಅದರಿಂದಾಗಿ ಗೆಲುವು ಸಾಧ್ಯವಾಯಿತು’ ಎಂದು 35 ವರ್ಷದ ತೆಂಬಾ ಹೇಳಿದರು. 

ತಂಡವು ಈ ಮಟ್ಟಕ್ಕೆ ಬೆಳೆಯಲು ಈ ಹಿಂದೆ ನಾಯಕತ್ವ ವಹಿಸಿದ್ದವರು ಮತ್ತು ಖ್ಯಾತನಾಮ ಆಟಗಾರರ ಶ್ರಮವೂ ಕಾರಣ ಎಂದು ತೆಂಬಾ ಸ್ಮರಿಸಿದರು. ವಿಶೇಷವಾಗಿ ಗ್ರೆಮ್ ಸ್ಮಿತ್ ಅವರ ಬಗ್ಗೆ ಗೌರವ ವ್ಯಕ್ತಪಡಿಸಿದರು.

‘ಸ್ಮಿತ್ ಮತ್ತು ತಂಡವು 2013 ರಿಂದ 2015ರ ಅವಧಿಯಲ್ಲಿ ತಂಡವು ಉನ್ನತ ಸಾಧನೆ ಮಾಡಿತ್ತು. ನಾವು ಕೂಡ ಅವರಂತೆಯೇ ಆಡಬೇಕು. ನಮ್ಮ ಗುರಿಯೂ ಗೆಲುವಾಗಬೇಕು ಎಂಬುದು ಈಗಿನ ತಂಡದ ಆಟಗಾರರಿಗೆ ಮನದಟ್ಟಾಗಿತ್ತು’ ಎಂದರು. 

ನಾಲ್ಕನೇ ಆವೃತ್ತಿ ವಿಶ್ವ ಟೆಸ್ಸ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ನಲ್ಲಿ ದಕ್ಷಿಣ ಆಫ್ರಿಕಾ ಇನ್ನಷ್ಟೇ ಅಭಿಯಾನ ಆರಂಭಿಸಬೇಕಿದೆ.

‘ಪಾಕಿಸ್ತಾನ ಮತ್ತು ಭಾರತ ಪ್ರವಾಸ ಮಾಡಲಿದ್ದೇವೆ. ಅಲ್ಲಿ ನಡೆಯುವ ಸರಣಿಗಳನ್ನು ಜಯಿಸಬೇಕಿದೆ’ ಎಂದರು. 

‘ನಿದ್ರೆ ಮಾತ್ರೆ ನುಂಗಿದರೂ ಮಲಗಲಿಲ್ಲ’

282 ರನ್‌ಗಳ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಏಡನ್ ಮರ್ಕರಂ ಗೆಲುವಿನ ರೂವಾರಿಯಾಗಿದ್ದರು. ಅವರು  ಶುಕ್ರವಾರ ದಿನದಾಟದ ಅಂತ್ಯಕ್ಕೆ ಅಜೇಯ 102 ರನ್ ಗಳಿಸಿದ್ದರು. ತಂಡದ ಜಯಕ್ಕೆ ಇನ್ನೂ 69 ರನ್‌ಗಳ ಅಗತ್ಯವಿತ್ತು. ಶನಿವಾರ ಅದನ್ನು ಸಾಧಿಸುವ ವಿಶ್ವಾಸವಿತ್ತು. ಆದರೂ ಶುಕ್ರವಾರ ರಾತ್ರಿಯಿಡೀ ಅವರಿಗೆ ನಿದ್ದೆಯೇ ಬಂದಿರಲಲ್ಲವಂತೆ. 

‘ಅವತ್ತು ರಾತ್ರಿ ಮಲಗಲು ಸಾಧ್ಯವೇ ಆಗಲಿಲ್ಲ. ನಿದ್ರೆ ಮಾತ್ರೆ ನುಂಗಿದರೂ ಮಲಗಲಾಗಲಿಲ್ಲ. ಹೋದ ವರ್ಷದ ಟಿ20 ವಿಶ್ವಕಪ್ ಫೈನಲ್ ಸೋಲಿನ ಕಹಿ ನೆನಪು ಪದೇಪದೇ ಮರುಕಳಿಸುತ್ತಿತ್ತು. ಅವತ್ತು ನಾನು ಅಸಹಾಯಕನಾಗಿ ಕುಳಿತಿದ್ದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮರ್ಕರಂ ಹೇಳಿದರು. 

ಅಮೆರಿಕ–ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ಎದುರು ಪರಾಭವಗೊಂಡಿತ್ತು. ಆ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವವನ್ನು ಮರ್ಕರಂ ವಹಿಸಿದ್ದರು. 

‘ಲಾರ್ಡ್ಸ್‌ನಲ್ಲಿ ಅವತ್ತು (ಶನಿವಾರ) ಅಪಾರ ಒತ್ತಡವಿತ್ತು. ನಾನು ಕ್ರೀಸ್‌ನಲ್ಲಿದ್ದ ಸೆಟ್ ಆಗಿದ್ದ ಕಾರಣ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಹೋಗಬೇಕೆನ್ನುವ ಛಲ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ತಂಡದ ಮತ್ತೊಬ್ಬ ಬ್ಯಾಟರ್ ಬಂದು ಒತ್ತಡಕ್ಕೆ ಸಿಲುಕಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.