ADVERTISEMENT

ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್ ಸಭೆ ಇಂದು

ಪಿಟಿಐ
Published 16 ಅಕ್ಟೋಬರ್ 2020, 19:30 IST
Last Updated 16 ಅಕ್ಟೋಬರ್ 2020, 19:30 IST
ಐಪಿಎಲ್ ಪಂದ್ಯ ವೀಕ್ಷಿಸಿದ ಸೌರವ್ ಗಂಗೂಲಿ  ಮತ್ತು ಜಯ್ ಶಾ
ಐಪಿಎಲ್ ಪಂದ್ಯ ವೀಕ್ಷಿಸಿದ ಸೌರವ್ ಗಂಗೂಲಿ  ಮತ್ತು ಜಯ್ ಶಾ   

ನವದೆಹಲಿ : ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಪೆಕ್ಸ್‌ ಕೌನ್ಸಿಲ್ ಸಭೆಯು ಶನಿವಾರ ನಡೆಯಲಿದೆ.

ನವೆಂಬರ್–ಡಿಸೆಂಬರ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದ್ದು, ಕ್ವಾರಂಟೈನ್ ನಿಯಮದ ಕುರಿತು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ಒಟ್ಟು ಐದು ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲು ಉದ್ಧೇಶಿಸಲಾಗಿದೆ. ಅದರಲ್ಲಿ ದೇಶಿ ಮತ್ತು ಅಂತರರಾಷ್ಟ್ರೀಯ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಕುರಿತೂ ಚರ್ಚೆಯಾಗಲಿದೆ.

ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ ನಂತರ ಟೆಸ್ಟ್ ತಂಡದ ಆಟಗಾರರು ಬ್ರಿಸ್ಬೇನ್‌ಗೆ ಪ್ರಯಾಣಿಸಲಿದ್ದಾರೆ. ಮೂರು ಮಾದರಿಗಳಲ್ಲಿಯೂ ಸರಣಿಗಳು ಅಲ್ಲಿ ನಡೆಯಲಿದೆ. ಆದ್ದರಿಂದ ಒಟ್ಟು 28 ಆಟಗಾರರು ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.

ADVERTISEMENT

ಆದರೆ ಆಸ್ಟ್ರೇಲಿಯಾದಲ್ಲಿ ಸರಣಿ ಆರಂಭಕ್ಕೂ ಮುನ್ನ 14 ದಿನಗಳ ಕ್ವಾರಂಟೈನ್ ನಿಯಮ ಪಾಲಿಸಲು ನಿಯಮ ರೂಪಿಸಲಾಗಿದೆ. ಯುಎಇಯಲ್ಲಿ ಎಲ್ಲ ಆಟಗಾರರೂ ಜೀವ ಸುರಕ್ಷಾ ವಲಯದಲ್ಲಿಯೇ ಇದ್ದು ಪ್ರಯಾಣ ಮಾಡುವುದರಿಂದ ಪ್ರತ್ಯೇಕವಾಸ ಅವಧಿಯನ್ನು ಕಡಿತಗೊಳಿಸಬೇಕು ಎಂದು ಬಿಸಿಸಿಐ ಮನವಿ ಮಾಡಿದೆ.

ಇಂಗ್ಲೆಂಡ್ ಎದುರಿನ ಸರಣಿಯನ್ನು ಭಾರತದಲ್ಲಿಯೇ ನಡೆಸುವುದೋ ಅಥವಾ ತಟಸ್ಥ ತಾಣವಾದ ಯುಎಇಯಲ್ಲಿ ಆಯೋಜಿಸುವುದೋ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ ಧುಮಾಲ್ ದುಬೈನಲ್ಲಿದ್ದಾರೆ. ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.