ADVERTISEMENT

ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ‘ಬೈಜುಸ್‌’ಗೆ

ಪಿಟಿಐ
Published 25 ಜುಲೈ 2019, 19:50 IST
Last Updated 25 ಜುಲೈ 2019, 19:50 IST
   

ನವದೆಹಲಿ: ಭಾರತ ತಂಡದ ಕ್ರಿಕೆಟ್‌ ಆಟಗಾರರ ಅಧಿಕೃತ ಪೋಷಾಕಿನಲ್ಲಿ (ಜರ್ಸಿ) ಮೊಬೈಲ್‌ ತಯಾರಕ ಕಂಪನಿ ‘ಒಪ್ಪೊ’ ಲೋಗೊ ಸ್ಥಾನದಲ್ಲಿ ಇನ್ನು ಮುಂದೆ ಆನ್‌ಲೈನ್‌ ಕಲಿಕಾ ಆ್ಯಪ್‌ ‘ಬೈಜುಸ್‌’ ಲೊಗೊ ಇರಲಿದೆ ಎಂದು ಬಿಸಿಸಿಐ ಗುರುವಾರ ಪ್ರಕಟಿಸಿದೆ.

ಪ್ರಾಯೋಜಕತ್ವ ಬದಲಾಗಿರುವುದು ಇದಕ್ಕೆ ಕಾರಣ.

‘ಇದುವರೆಗೆ ತಂಡದ ಅಧಿಕೃತ ಪ್ರಾಯೋಜಕರಾಗಿದ್ದ ಒಪ್ಪೊ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೊಣೆಗಳನ್ನು ಇನ್ನು ಮುಂದೆ ಬೈಜು’ಸ್‌ ವಹಿಸಿಕೊಳ್ಳಲಿದೆ’ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಆನ್‌ಲೈನ್‌ ಶಿಕ್ಷಣ ಮತ್ತು ಕಲಿಕಾ ಆ್ಯಪ್‌ ಆಗಿರುವ ಬೆಂಗಳೂರು ಮೂಲದ ಬೈಜುಸ್‌ 2022ರ ಮಾರ್ಚ್‌ 31ರವರೆಗೆ ಪ್ರಾಯೋಜಕತ್ವದ ಅವಧಿ ಹೊಂದಿದೆ. ಬಿಸಿಸಿಐ ಮತ್ತು ಒಪ್ಪೊ ನಡುವೆ 2017ರಲ್ಲಿ ಐದು ವರ್ಷಗಳ ಅವಧಿಗೆ ಒಪ್ಪಂದ ನಡೆದಿತ್ತು. ₹1079 ಕೋಟಿ ಮೊತ್ತಕ್ಕೆ ಈ ಒಪ್ಪಂದ ನಡೆದಿತ್ತೆನ್ನಲಾಗಿದೆ.

ಸೆಪ್ಟೆಂಬರ್‌ 15 ರಿಂದ ನಡೆಯುವ ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯಿಂದ ಕೊಹ್ಲಿ ಪಡೆ ಹೊಸ ಪ್ರಾಯೋಜಕರ ಲೋಗೊ ಧರಿಸಲಿದೆ. ಈ ವರ್ಗಾವಣೆ ಒಪ್ಪಂದ ಒಪ್ಪೊ, ಬೈಜು ಮತ್ತು ಬಿಸಿಸಿಐ ನಡುವೆ ನಡೆದಿದೆ. ಒಪ್ಪೊ, 2017ರಲ್ಲಿ ವಿವೊ ಸಲ್ಲಿಸಿದ್ದ ₹ 768 ಕೋಟಿ ಮೊತ್ತದ ಬಿಡ್‌ ಹಿಂದಿಕ್ಕಿ ಪ್ರಾಯೋಜಕತ್ವ ಪಡೆದಿತ್ತು.

ಹೊಸ ಒಪ್ಪಂದ ಎಷ್ಟು ಮೊತ್ತಕ್ಕೆ ನಡೆದಿದೆ ಎಂಬುದನ್ನು ಬಿಸಿಸಿಐ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.