ADVERTISEMENT

ಬಿಸಿಸಿಐನಲ್ಲಿ ‘ದಾದಾ ಗಿರಿ’ ಶುರು

ಪಿಟಿಐ
Published 23 ಅಕ್ಟೋಬರ್ 2019, 6:09 IST
Last Updated 23 ಅಕ್ಟೋಬರ್ 2019, 6:09 IST
   

ಮುಂಬೈ: ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್‌ ಗಂಗೂಲಿ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ 39ನೇ ಅಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು. ತನ್ಮೂಲಕ ಸುಪ್ರೀಂ ಕೋರ್ಟ್‌ ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯ 33 ತಿಂಗಳ ಆಡಳಿತ ಅಂತ್ಯ ಕಂಡಿತು.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಬಿಟ್ಟರೆ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಅದರಂತೆಇಂದು ಮುಂಬೈನಲ್ಲಿ ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಗಂಗೂಲಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ರ ಜಯ್‌ ಶಾ ಕಾರ್ಯದರ್ಶಿಯಾದರು. ಉತ್ತರಾಖಂಡದ ಮಹಿಮ್‌ ವರ್ಮಾ ಹೊಸ ಉಪಾಧ್ಯಕ್ಷರಾಗಿದ್ದಾರೆ.

ಕೇಂದ್ರ ಸಂಪುಟದಲ್ಲಿ ಸಹಾಯಕ ಸಚಿವರಾಗಿರುವ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷರಾಗಿರುವ ಅನುರಾಗ್‌ ಠಾಕೂರ್‌ ಅವರ ಸೋದರ ಅರುಣ್‌ ಧುಮಾಲ್ ಖಜಾಂಚಿಯಾಗಿದ್ದಾರೆ. ಕೇರಳದ ಜಯೇಶ್‌ ಜಾರ್ಜ್‌ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ADVERTISEMENT

ಗಂಗೂಲಿ ಅಧಿಕಾರವಧಿ 9 ತಿಂಗಳು ಮಾತ್ರ

ಗಂಗೂಲಿ ಅವರ ಅಧಿಕಾರಾವಧಿ ಒಂಬತ್ತು ತಿಂಗಳಿಗೆ (ಮುಂದಿನ ವರ್ಷದ ಜುಲೈವರೆಗೆ) ಸೀಮಿತಗೊಳ್ಳಲಿದೆ. ಹೊಸ ನಿಯಮಾವಳಿ ಪ್ರಕಾರ ಆರು ವರ್ಷ ಕೇಂದ್ರ ಅಥವಾ ರಾಜ್ಯ ಸಂಸ್ಥೆಯಲ್ಲಿ ಅಧಿಕಾರದಲ್ಲಿದ್ದರೆ ಅವರು ಮೂರು ವರ್ಷ ಯಾವುದೇ ಅಧಿಕಾರ ಅನುಭವಿಸುವಂತಿಲ್ಲ.

ಗಂಗೂಲಿ ಈ ಹಿಂದೆ ಬಂಗಾಳ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಮತ್ತು ನಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೆಲವು ವರ್ಷ ಭಾರತ ತಂಡದ ನಾಯಕರೂ ಆಗಿ ಯಶಸ್ಸು ಗಳಿಸಿದ್ದ ಅವರ ಮೇಲೆ ನಿರೀಕ್ಷೆಯ ಭಾರ ಇದೆ.

ಹಿತಾಸಕ್ತಿ ಸಂಘರ್ಷ ನಿಯಮದಿಂದ, ಕ್ರಿಕೆಟ್‌ ಸಲಹಾ ಮಂಡಳಿ (ಸಿಎಸಿ) ಮತ್ತು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ಕೆಲವು ಹಿರಿಯ ಆಟಗಾರರ ಸೇವೆ ಪಡೆಯಲು ಸಮಸ್ಯೆಯಾಗುತ್ತಿದೆ. ಈ ಸವಾಲನ್ನೂ ಅವರು ನಿಭಾಯಿಸಬೇಕಾಗಿದೆ.

ಶ್ರೀನಿವಾಸನ್‌ ಬಣದ ನಿಷ್ಠರಾಗಿರುವ ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಜೊತೆ ಅವರ ಸಂಬಂಧ ಹೇಗಿರುತ್ತದೆ ಎನ್ನುವುದೂ ಕುತೂಹಲಕ್ಕೆ ಕಾರಣವಾಗಿದೆ.

ಕ್ರಿಕೆಟ್‌ಗೆ ಸಂಬಂಧಿಸಿ– ಮಹೇಂದ್ರ ಸಿಂಗ್‌ ಧೋನಿ ಅವರ ಕ್ರಿಕೆಟ್‌ ಭವಿಷ್ಯ, ಅಹರ್ನಿಶಿ ಟೆಸ್ಟ್‌ ಪಂದ್ಯಗಳು, ಶಾಶ್ವತ ಟೆಸ್ಟ್‌ ಕೇಂದ್ರಗಳ ಕುರಿತು ಅವರ ನಿಲುವುಗಳು ಯಾವ ರೀತಿ ಇರಬಹುದು ಎಂಬುದನ್ನೂ ಕಾಯಲಾಗುತ್ತಿದೆ.

ಹಿಂದಿನ ಮೂರು ವರ್ಷಗಳ ಲೆಕ್ಕಪತ್ರಗಳಿಗೆ ಮಂಜೂರಾತಿ ನೀಡಿದ ನಂತರ ಚುನಾವಣಾ ಅಧಿಕಾರಿ ಅವರು ನೂತನ ಪದಾಧಿಕಾರಿಗಳ ಘೋಷಣೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.